ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳಿಗೆ ಶೀಘ್ರ ಚಾಲನೆ – ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್ 15: ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ, ಶೀಘ್ರದಲ್ಲೇ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳು ಸಿದ್ಧವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ವಲಯಕ್ಕೆ ಸಂಬಂಧಿಸಿದ ಕಡತಗಳು 30-40 ವರ್ಷಗಳಿಂದ ಸ್ಥಗಿತವಾಗಿದ್ದರೂ, ಈಗ ಕೆಲಸ ಮಿಷನ್ ಮೋಡ್‌ನಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ವರ್ಷದ ಅಂತ್ಯದೊಳಗೆ ಭಾರತೀಯ ಎಂಜಿನಿಯರ್‌ಗಳು ತಯಾರಿಸಿದ ಮೇಡ್ ಇನ್ ಇಂಡಿಯಾ ಚಿಪ್‌ಗಳು ಮಾರುಕಟ್ಟೆಗೆ ಬರಲಿವೆ. 2025ರ ಅಂತ್ಯದ ವೇಳೆಗೆ ದೇಶೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆ ಸಂಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಎಂದು ಮೋದಿ ಭರವಸೆ ನೀಡಿದರು.

“ಇದು ಐಟಿ ಮತ್ತು ಡೇಟಾದ ಶಕ್ತಿಯ ಕಾಲ. ಸ್ವದೇಶಿ ಕಾರ್ಯಾಚರಣಾ ವ್ಯವಸ್ಥೆಗಳು, ಬಲವಾದ ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ನಮ್ಮ ಆದ್ಯತೆಗಳಾಗಬೇಕು. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಭಾರತೀಯ ಸಾಮರ್ಥ್ಯ ಮತ್ತು ವಿಶ್ವಾಸ ಪ್ರತಿಫಲಿಸಬೇಕು,” ಎಂದು ಪ್ರಧಾನಿ ಒತ್ತಿ ಹೇಳಿದರು.