ದರ್ಶನ್​ ಜಾಮೀನು ರದ್ದು; ಪೊಲೀಸರ ಮುಂದಿನ ಕಾನೂನು ಕ್ರಮವೇನು?

ಬೆಂಗಳೂರು : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಮತ್ತೆ ಕೊಲೆ ಆರೋಪಿಗಳಿಗೆ ಜೈಲೇ ಗತಿ ಎನ್ನುವಂತಾಗಿದೆ. ಹಾಗಾದರೆ ದರ್ಶನ್​​ಗೆ ಮುಂದಿರುವ ಆಯ್ಕೆಗಳೇನು, ಪೊಲೀಸರ ಮುಂದಿನ ಕಾನೂನು ಕ್ರಮಗಳು ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊದಲಿಗೆ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್​ ಸುಪ್ರೀಂಕೋರ್ಟ್​ನ ಜಾಮೀನು ರದ್ದು ಆದೇಶದ ಪ್ರತಿ ಪಡೆಯಲಿದ್ದಾರೆ. ಆ ಬಳಿಕ ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ರದ್ದು ಆದೇಶದ ಪ್ರತಿ ಸಲ್ಲಿಕೆ ಮಾಡಿ ಅರೆಸ್ಟ್ ವಾರೆಂಟ್ ಪಡೆಯಲಿದ್ದಾರೆ.

ಕೋರ್ಟ್​ನಿಂದ ಅರೆಸ್ಟ್ ವಾರೆಂಟ್ ಪಡೆದು ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಲಿದ್ದಾರೆ. ಅದಕ್ಕೂ ಮೊದಲೇ ಆರೋಪಿಗಳು ಸರೆಂಡರ್ ಆದರೆ ಅರೆಸ್ಟ್ ವಾರೆಂಟ್ ಪಡೆಯುವ ಅವಶ್ಯಕತೆಯಿಲ್ಲ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಆಯಾ ಜೈಲುಗಳಿಗೆ ಆರೋಪಿಗಳನ್ನು ಪೊಲೀಸರು ವರ್ಗಾಯಿಸಲಿದ್ದಾರೆ.

ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆ

ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆಗಳಲಿಲ್ಲ. ಶೀಘ್ರದಲ್ಲೇ ಸೆಷನ್ಸ್ ಕೋರ್ಟ್​ಗೆ ಶರಣಾಗಬೇಕಿದೆ. ಇಂದು ತೀರ್ಪಿನ ಪ್ರತಿ ಸಿಕ್ಕ ಬಳಿಕ ಈ ಬಗ್ಗೆ ಶರಣಾಗುವುದು ಯಾವಾಗ ಎಂದು ಸಂಜೆಯೊಳಗೆ ತೀರ್ಮಾನ ಸಾಧ್ಯತೆ ಇದೆ. ಸದ್ಯ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಾಗಿ ವಕೀಲರು ಕಾಯುತ್ತಿದ್ದಾರೆ.

ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್​ ಮಾಡುವ ಸಾಧ್ಯತೆ

ಇನ್ನು ದರ್ಶನ್​ ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ. ಈ ಹಿಂದೆ 63 ದಿನಗಳ ಕಾಲ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಅಕ್ಟೋಬರ್ 30ಕ್ಕೆ ಅಲ್ಲಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್​ ಮಾಡುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಜೈಲಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ದರ್ಶನ್​ ಬಳಲಿದ್ದರು. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹಿತ ಮಾಡಿಸಲಾಗಿತ್ತು. ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ದರ್ಶನ್​ ಜಾಮೀನು ಪಡೆದಿದ್ದರು.