ವಾಷಿಂಗ್ಟನ್: ರಷ್ಯಾದಿಂದ ಅಮೆರಿಕ ಈಗಲೂ ವ್ಯವಹಾರ ನಡೆಸುತ್ತಿದೆ ಎಂಬ ಭಾರತದ ಆರೋಪಕ್ಕೆ ಉತ್ತರ ನೀಡದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚಿದ್ದಾರೆ.

ಅಮರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸುತ್ತಿದೆ ಎಂಬ ಭಾರತದ ಮಾಡಿದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಯುರೇನಿಯಂ ಮತ್ತು ರಸಗೊಬ್ಬರ ವ್ಯಾಪಾರದ ಬಗ್ಗೆ ನನಗೆ ತಿಳಿದಿಲ್ಲ. ನಾನು ಅದನ್ನು ಪರಿಶೀಲಿಸಬೇಕು ಎಂದಷ್ಟೇ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕವೂ ಅಮೆರಿಕ ಶತಕೋಟಿ ಡಾಲರ್ ಮೌಲ್ಯದ ಇಂಧನ ಮತ್ತು ಎನ್‌ರಿಚ್ ಆಗಿರುವ ಯುರೇನಿಯಂ ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ದಾಳಿಗೂ ಮೊದಲು ಭಾರೀ ಪ್ರಮಾಣದಲ್ಲಿ ಅಮೆರಿಕ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಪ್ರಮಾಣ ಕಡಿಮೆಯಾಗಿದ್ದರೂ ಆಮದು ಮುಂದುವರಿಯುತ್ತಿದೆ.
2024 ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರಗಳನ್ನು ಅಮೆರಿಕ ಆಮದು ಮಾಡಿದೆ. 2024 ರಲ್ಲಿ ಪಲ್ಲಾಡಿಯಮ್ ಸೇರಿದಂತೆ 878 ಮಿಲಿಯನ್ ಡಾಲರ್ ಮೌಲ್ಯದ ಅಮೂಲ್ಯ ಲೋಹಗಳ ಆಮದು ಮಾಡಿಕೊಂಡಿದೆ.
ಭಾರತ ಹೇಳಿದ್ದೇನು?
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಉಕ್ರೇನ್ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಕ್ಕೆ ಭಾರತ ಅಂಕಿಸಂಖ್ಯೆಯನ್ನು ನೀಡುವ ಮೂಲಕ ಖಡಕ್ ತಿರುಗೇಟು ನೀಡಿತ್ತು.
ಅಮೆರಿಕ ತನ್ನ ಪರಮಾಣು ಉದ್ಯಮಕ್ಕೆ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ಇವಿ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಈಗಲೂ ಆಮದು ಮಾಡಿಕೊಳ್ಳುತ್ತಿದೆ.
ಉಕ್ರೇನ್ ಸಂಘರ್ಷ ಆರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿವೆ. ನಿಜವಾಗಿ ಸಂಘರ್ಷ ಪ್ರಾರಂಭವಾದ ನಂತರ ಸಾಂಪ್ರದಾಯಿಕವಾಗಿ ಬರುತ್ತಿದ್ದ ತೈಲಗಳನ್ನು ಯುರೋಪ್ ದೇಶಗಳು ಆಮದು ಮಾಡಿಕೊಳ್ಳಲು ಮುಂದಾದವು. ಈ ಕಾರಣಕ್ಕೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಜಾಗತಿಕ ತೈಲ ಮಾರುಕಟ್ಟೆಗಳ ಬೆಲೆ ಸ್ಥಿರವಾಗಿರಲು ಆ ಸಮಯದಲ್ಲಿ ಅಮೆರಿಕ ಭಾರತದ ನಿರ್ಧಾರಕ್ಕೆ ಬೆಂಬಲ ನೀಡಿತ್ತು.
ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ತೈಲ ನೀಡಲು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ.
