ಕೆವೈಸಿಯಿಂದ ಹಿಡಿದು ರೀಟೇಲ್ ಡೈರೆಕ್ಟ್​ವರೆಗೆ ಆರ್​ಬಿಐನಿಂದ ಮೂರು ಮಹತ್ವದ ಗ್ರಾಹಕಕೇಂದ್ರಿತ ಕ್ರಮಗಳ ಘೋಷಣೆ

ನವದೆಹಲಿ, ಆಗಸ್ಟ್ 6: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಪ್ರಕಟಿಸಿದ ಎಂಪಿಸಿ ಸಭೆ ನಿರ್ಧಾರಗಳಲ್ಲಿ ಕೆಲ ಗ್ರಾಹಕ ಕೇಂದ್ರಿತ ಕ್ರಮಗಳೂ ಒಳಗೊಂಡಿವೆ. ಗ್ರಾಹಕರ ಅನುಕೂಲತೆ, ಹಣಕಾಸು ಒಳಗೊಳ್ಳುವಿಕೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ರೂಪಿಸಲಾಗಿದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ. ಮೃತ ಗ್ರಾಹಕರ ಅಕೌಂಟ್​ಗಳನ್ನು ಅವರ ವಾರಸುದಾರರಿಗೆ ಸೆಟಲ್ಮೆಂಟ್ ಮಾಡುವ ಪ್ರಕ್ರಿಯೆ ಸರಳಗೊಳಿಸಿರುವುದೂ ಈ ಕ್ರಮಗಳಲ್ಲಿ ಒಳಗೊಳ್ಳಲಾಗಿದೆ.

ಜನರ ಬಳಿಗೇ ಹೋಗಿ ಪುನರ್​ಕೆವೈಸಿ ಪಡೆಯುವ ವ್ಯವಸ್ಥೆ

ಪಿಎಂ ಜನ್ ಧನ್ ಯೋಜನೆ ಶುರುವಾಗಿ 10 ವರ್ಷ ಆಗಿದೆ. ಈ ಸ್ಕೀಮ್ ಅಡಿ ಶುರುವಾದ ಹೆಚ್ಚಿನ ಬ್ಯಾಂಕ್ ಅಕೌಂಟ್​ಗಳಿಗೆ ಮತ್ತೊಮ್ಮೆ ಕೆವೈಸಿ ಪಡೆಯಬೇಕಿದೆ. ಇದಕ್ಕಾಗಿ, ಪಂಚಾಯತ್ ಮಟ್ಟದಲ್ಲಿ ಬ್ಯಾಂಕುಗಳು ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಶಿಬಿರಗಳನ್ನು ನಡೆಸಲಿವೆ. ಇಲ್ಲಿ ಬ್ಯಾಂಕ್ ಖಾತೆದಾರರಿಗೆ ಮರು-ಕೆವೈಸಿ ಪ್ರಕ್ರಿಯೆಯಲ್ಲಿ ನೆರವು ನೀಡಲಾಗುತ್ತದೆ. ಹಾಗೆಯೇ, ಮೈಕ್ರೋ ಇನ್ಷೂರೆನ್ಸ್, ಪೆನ್ಷನ್ ಸ್ಕೀಮ್ ಇತ್ಯಾದಿ ಸಂಬಂಧಿತ ಸೇವೆ ಹಾಗೂ ಮಾಹಿತಿಯನ್ನೂ ಈ ಶಿಬಿರಗಳಲ್ಲಿ ನೀಡಲಾಗುತ್ತದೆ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಮೃತ ಗ್ರಾಹಕರ ಬ್ಯಾಂಕ್ ಹಣಕ್ಕೆ ಕ್ಲೇಮ್ ಸಲ್ಲಿಸುವುದು ಸರಳ

ಮೃತ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿನ ಹಣಕ್ಕೆ ವಾರಸುದಾರರು ಸಲ್ಲಿಸಿದ ಕ್ಲೇಮ್ ಅನ್ನು ಸೆಟಲ್ಮೆಂಟ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಆರ್​ಬಿಐ ಹೇಳಿದೆ.

ಆರ್​ಬಿಐ ರೀಟೇಲ್ ಡೈರೆಕ್ಟ್

ಆರ್​ಬಿಐ ತನ್ನ ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್ ಅನ್ನು ಅಪ್​ಗ್ರೇಡ್ ಮಾಡಿದೆ. ಸರ್ಕಾರಿ ಬಾಂಡ್ ಇತ್ಯಾದಿ ಗವರ್ನ್ಮೆಂಟ್ ಸೆಕ್ಯೂರಿಟೀಸ್​ಗಳಲ್ಲಿ ವ್ಯಕ್ತಿಗಳು ಹೂಡಿಕೆ ಮಾಡಲು ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ. ಈ ರೀಟೇಲ್ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಲು ಸಹಾಯವಾಗುವಂತಹ ಮತ್ತಷ್ಟು ಪರಿಕರಗಳನ್ನು ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್​ನಲ್ಲಿ ನೀಡಲಾಗಿದೆ.