‘ದರ್ಶನ್‌ಗೆ ಜಾಮೀನು ದೊರೆತರೆ ನನಗೂ ಯಾಕೆ ಇಲ್ಲ?’ – ಆರೋಪಿಯಿಂದ ಕಾನೂನು ಪಠಣ

ಹುಬ್ಬಳ್ಳಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಹತ್ಯೆ ಪ್ರಕರಣದ ಆರೋಪಿ ಫಯಾಜ್‍, ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ನೀಡಿ ಎಂದು ಬೇಡಿಕೆ ಇಟ್ಟಿದ್ದಾನೆ.

ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದೇ ತಿಂಗಳು 4ರಂದು ಜಾಮೀನು ಅರ್ಜಿ ಅಂತಿಮ ಆದೇಶವನ್ನು ನ್ಯಾಯಾಲಯ ನೀಡಲಿದೆ.

ಈ ಬಗ್ಗೆ ಮಾಧ್ಯಮದ ಮುಂದೆ ನೇಹಾ ತಂದೆ ನಿರಂಜನ್ ಅಸಮಾಧಾನ ಹೊರಹಾಕಿದ್ದಾರೆ. ನಟ ದರ್ಶನ ತಮ್ಮ ನಟನೆ ಮತ್ತು ಒಳ್ಳೆಯ ಕಾರ್ಯದಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದಲ್ಲಿ ಇತರೇ ಆರೋಪಿಗಳಿಗೆ ಮಾದರಿಯಾಗಿದ್ದು ನಿಜಕ್ಕೂ ನೋವು ತಂದಿದೆ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಏನಿದು ಪ್ರಕರಣ?
ಏ.18ರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬದಿ ಅವಿತು ಕುಳಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿತ್ತು. ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳಾಗಿದ್ದವು.‌