ಮಂಗಳೂರು (ದಕ್ಷಿಣ ಕನ್ನಡ): ನಗರದ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಭಾಗವಾಗಿ ಶುಕ್ರವಾರ 123 ಕೆ. ಜಿ. ಗಾಂಜಾ ಮತ್ತು ಅದನ್ನು ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮಸೂದ್ ಎಂ. ಕೆ (45), ಮೊಹಮ್ಮದ್ ಆಶಿಕ್ (24) ಮತ್ತು ಸುಬೇರ್ (30) ಬಂಧಿತ ಆರೋಪಿಗಳು.
ಆರೋಪಿಗಳು ಆಂಧ್ರಪ್ರದೇಶದಿಂದ ಗಾಂಜಾ ಸಾಗಿಸುತ್ತಿದ್ದರು. ಎರಡು ಕಾರುಗಳಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು, ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ನ ಮಠದಕೆರೆ ಎಂಬ ಸ್ಥಳದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ಸಮೇತ ಎರಡು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿಗಳಿಂದ 123 ಕೆ.ಜಿ ಗಾಂಜಾ, ಎರಡು ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಈ ಎಲ್ಲಾ ಸೊತ್ತಿನ ಒಟ್ಟು ಮೌಲ್ಯ ಸುಮಾರು 46,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬೃಹತ್ ಗಾಂಜಾ ಮಾರಾಟ/ಸಾಗಣೆ ಜಾಲದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಭಾಗವಹಿಸಿದ್ದರು.

