ಜೈಪುರದಲ್ಲಿ ಶಾಲಾ ಕಟ್ಟಡ ಕುಸಿದು 4 ಮಕ್ಕಳ ದಾರುಣ ಸಾವು

ಜೈಪುರ: ಪ್ರಾಥಮಿಕ ಶಾಲಾ ಕಟ್ಟದ ಮೇಲ್ಛಾವಣಿ ಕುಸಿದ ಪರಿಣಾಮ ಕನಿಷ್ಠ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಝಲಾವರ್‌ನಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಝಲಾವರ್‌ನಲ್ಲಿರುವ ಪಿಪ್ಲೋಡಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಲ್ಲದೇ 60ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಅವಶೇಷಗಳಡಿ ಸಿಲುಕಿರುವ ಮಕ್ಕಳನ್ನು ರಕ್ಷಣಾ ತಂಡ ಸ್ಥಳೀಯರು ಸಹ ಅಧಿಕಾರಿಗಳೊಂದಿಗೆ ಸೇರಿ ಹೊರ ತೆಗೆಯುವ ಕಾರ್ಯ ನಡೆದಿದೆ..

ಮೃತಪಟ್ಟ ಮಕ್ಕಳ ಶವಗಳನ್ನ ಹೊರತೆಗೆಯಲಾಗಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಅವಶೇಷಗಳ ಅಡಿ ಸಿಲುಕಿರುವ ಮಕ್ಕಳ ರಕ್ಷಣಾ ಕಾರ್ಯ ನಡೆಯುತ್ತಿದೆ. ಕ್ರೇನ್‌ಗಳ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 8:30ಕ್ಕೆ ಶಾಲೆ ಶುರುವಾದ ವೇಳೆ ದುರಂತ ಸಂಭವಿಸಿದೆ. ಈ ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಭಾರೀ ಮಳೆಯ ಕಾರಣ ಮೇಲ್ಛಾವಣಿ ಕುಸಿದಿದೆ ಎಂದು ಹೇಳಲಾಗುತ್ತಿದೆ.