ಆದಾಯಕ್ಕೂ ಮೀರಿ ಆಸ್ತಿ: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತದ ಶಾಕ್ ದಾಳಿ

ಬೆಂಗಳೂರು, ಜುಲೈ 23: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ ಲೋಕಾಯುಕ್ತ ಇಲಾಖೆ ಭಾರಿ ದಾಳಿ ನಡೆಸಿದೆ. ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದಾಗಿ ಬಂದಿರುವ ಮಾಹಿತಿಯಡಿ ಬೆಂಗಳೂರು, ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಹಲವೆಡೆ ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಹೀಗಾಗಿ ಸರ್ಕಾರದ ವ್ಯವಸ್ಥೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಐಎಎಸ್ ಅಧಿಕಾರಿಗೂ ಲೋಕಾಯುಕ್ತದ ಝಟ್ಕಾ:
ಬೆಂಗಳೂರು ಆರ್.ಟಿ.ನಗರದಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ವಾಸಂತಿ ಅಮರ್ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ಕಾರದ ಜಮೀನು ಖಾಸಗಿಗಳ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪದ ಕುರಿತು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ವಾಸಂತಿ ಅಮರ್ ಅವರು ಬೆಂಗಳೂರು ನಗರದ ವಿಶೇಷ ಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೈಸೂರು ನಗರದಲ್ಲಿ ದಾಳಿ:
ಮೈಸೂರಿನ ಸಿದ್ದಾರ್ಥ ಲೇಔಟ್‌ನಲ್ಲಿರುವ ಪಾಲಿಕೆ ಉಪ ವಿಭಾಗಾಧಿಕಾರಿ ವೆಂಕಟರಾಮ್ ಹಾಗೂ ಜೆಪಿ ನಗರದಲ್ಲಿರುವ ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಅವರ ಮನೆಗಳ ಮೇಲೆ ದಾಳಿ ನಡೆದಿದೆ. ಇಬ್ಬರ ವಿರುದ್ಧವೂ ‘ಆದಾಯಕ್ಕೂ ಮೀರಿ ಆಸ್ತಿ’ ಗಳಿಸಿರುವ ಆರೋಪದಡಿಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ಬಳ್ಳಾರಿಯಲ್ಲಿ ಮೂರು ಕಡೆ ಪರಿಶೀಲನೆ:
ಬೆಂಗಳೂರು ಮೂಲದ ನಗರ ಹಾಗೂ ಗ್ರಾಮಯೋಜನಾ ಅಧಿಕಾರಿ ಮಾರುತಿ ಬಗಲಿ ಅವರ ಬಳ್ಳಾರಿಯ ಮೂರು ಆಸ್ತಿಗಳ ಮೇಲೆ ದಾಳಿ ನಡೆದಿದೆ. ರಾಜ್ಯದ ಹಲವೆಡೆ ಮಾರುತಿ ಬಗಲಿ ಅವರು ಅಕ್ರಮವಾಗಿ ಆಸ್ತಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಈ ಹಿನ್ನೆಲೆ ಲೋಕಾಯುಕ್ತದ ವಿಶಿಷ್ಟ ತಂಡ ಸ್ಥಳದಲ್ಲಿ ಪರಿಶೀಲನೆ ಕೈಗೊಂಡಿದೆ.

ಕೊಪ್ಪಳದಲ್ಲಿ ಅಧಿಕಾರಿ ತಂಗಿದ ಮನೆಯಲ್ಲಿ ಲೋಕಾ ದಾಳಿ:
ಕೊಪ್ಪಳ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಶೆಕು ಚವ್ಹಾಣ್ ಅವರ ಮೇಲೆ ಲಗ್ಗೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು, ಬೆಳಗ್ಗಿನ ಜಾವ ಅಭಿಷೇಕ ಬಡಾವಣೆ ಹಾಗೂ ಕೀರ್ತಿ ಕಾಲೋನಿಯಲ್ಲಿರುವ ಅವರ ಎರಡು ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಯಿಂದ ಅಧಿಕಾರಿಗೆ ತೀವ್ರ ಶಾಕ್ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕಾರ್ಯಾಚರಣೆಗೆ ಇನ್ಸ್ಪೆಕ್ಟರ್ ಸುನೀಲ ಮೇಗಳಮನಿ ನೇತೃತ್ವ ನೀಡಿದ್ದರು.

ಹುಬ್ಬಳ್ಳಿಯಲ್ಲೂ ಕಾರ್ಯಾಚರಣೆ:
ಇದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದ್ದು, ಹಗರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಧ್ಯ ಪರಿಶೀಲನೆ ಮಾಡಲಾಗುತ್ತಿದೆ.