
ಕಾರವಾರ – ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ದೇಶದಾದ್ಯಾಂತ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನಕ್ಕೊಳಗಾಗಿರುವ ಮಹತ್ವದ ಘಟನೆ ನಡೆದಿದೆ.
ಈತನನ್ನು ಉತ್ತರ ಕನ್ನಡ ಜಿಲ್ಲೆಯ ಸಿಐಎನ್ (CEN) ಅಪರಾಧ ಪೊಲೀಸರು ಬಂಧಿಸಿದ್ದು, ಆರೋಪಿ ಹರ್ದೀಪ್ ಸಿಂಗ್ (ವಯಸ್ಸು 39), ಪಾಟ್ನಾದ ನಿವಾಸಿ ಎಂಬುದು ತಿಳಿದು ಬಂದಿದೆ. ಜುಲೈ 12ರಂದು ಬಿಹಾರದಿಂದ ಬಂಧಿಸಿ ಕಾರವಾರಕ್ಕೆ ಕರೆತರಲಾಗಿದೆ.
ಪ್ರಕರಣದ ಹಿನ್ನೆಲೆ:
ಪೂರ್ವ ಕರಾವಳಿಯ ವಿಲ್ಸನ್ ಫರ್ನಾಂಡಿಸ್ ಎಂಬವರನ್ನು ಡಿಎಚ್‌ಎಲ್ ಕೊರಿಯರ್ ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿ, ಅವರ ಪಾರ್ಸೆಲ್‌ನಲ್ಲಿ ಮಾದಕವಸ್ತುಗಳಿವೆ ಎಂದು ನಂಬಿಸಿದ ಆರೋಪಿಯು, ಮುಂಬೈ ಪೊಲೀಸ್ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ ಬೆದರಿಸಿ, ರೂ. 3.80 ಲಕ್ಷ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಸಂಬಂಧ CEN ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಪಾಸಣೆಯಲ್ಲಿ ಪಡೆದ ಮಾಹಿತಿ:
ತನಿಖೆಯ ವೇಳೆ, ಆರೋಪಿ 11ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದ 29 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ದೃಢಪಟ್ಟಿದೆ. ಇದಲ್ಲದೆ, ಹೂಡಿಕೆ ವಂಚನೆಗಳಲ್ಲಿ ಸಹ ಭಾಗಿಯಾಗಿರುವುದೂ ಬಹಿರಂಗವಾಗಿದೆ.
ಆರೋಪಿಯು ಹಲವು ಬ್ಯಾಂಕುಗಳಲ್ಲಿ 8 ಉಳಿತಾಯ ಖಾತೆ ಮತ್ತು 2 ಚಾಲ್ತಿ ಖಾತೆಗಳನ್ನು ಹೊಂದಿದ್ದನು.
ಪೊಲೀಸರ ಕಾರ್ಯಾಚರಣೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ಬಿಹಾರಕ್ಕೆ ತೆರಳಿ ಈ ಕಾರ್ಯಾಚರಣೆ ನಡೆಸಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

