
ಭಟ್ಕಳ: ಮನೆಯ ಮುಂದೆ ನಿಲ್ಲಿಸಿದ್ದ ಡಿಜೈರ್ ಕಾರು ಕಳುವಾದ ಪ್ರಕರಣದಲ್ಲಿ ಭಟ್ಕಳ ಶಹರ ಪೊಲೀಸರು ಕೇವಲ 48 ಗಂಟೆಗಳಲ್ಲಿ ಕಾರು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಟ್ಟಳ್ಳಿಯ ರೈಲ್ವೆ ನಿಲ್ದಾಣದ ಬಳಿ ಇರುವ ಶೇಖರ ಸೋಮಯ್ಯ ನಾಯ್ಕ ಅವರ ಕಾರು ಜುಲೈ 13ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಕಳವಾಗಿತ್ತು. ಈ ಕುರಿತು ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪಿಎಸ್‌ಐ ತಿಮ್ಮಪ್ಪ ಬೆಡುಮನೆ ಅವರ ನೇತೃತ್ವದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶೋಧ ಕಾರ್ಯ ಆರಂಭಿಸಲಾಗಿದ್ದು, ಕಾರು ಶಿರೂರು ಟೋಲ್‌ಗೇಟ್ ಮಾರ್ಗವಾಗಿ ಸಾಗಿದ್ದ ಬಗ್ಗೆ ಪತ್ತೆಹಚ್ಚಲಾಯಿತು. ಇನ್‌ಸ್ಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ಬೈಂದೂರು, ಉಡುಪಿ, ಮಂಗಳೂರು ಕಡೆಗೆ ರವಾನಿಸಲಾಯಿತು.

ಜುಲೈ 15ರಂದು ಮಧ್ಯಾಹ್ನ ಬೈಂದೂರಿನ ರೈಲ್ವೆ ನಿಲ್ದಾಣ ಕ್ರಾಸ್ ಬಳಿಯಲ್ಲಿಯೇ ಕಾರು ಪತ್ತೆಯಾಗಿದ್ದು, ಇಬ್ಬರು ಆರೋಪಿಗಳು – ಫೌಜಾನ್ ಅಹ್ಮದ್ (20) ಮತ್ತು ದರ್ಶನ ನಾಯ್ಕ (18) ಬಂಧಿತರಾಗಿದ್ದಾರೆ.

ಬಂಧಿತ ಫೌಜಾನ್ ವಿರುದ್ಧ ಈ ಹಿಂದೆಯೂ ಕಳ್ಳತನ ಪ್ರಕರಣವಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಮತ್ತೆ ಕಳ್ಳತನದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶಾಂತಿನಾಥ ಪಾಸಾನೆ, ನವೀನ್ ನಾಯ್ಕ, ದೀಪಕ ನಾಯ್ಕ, ದಿನೇಶ್ ನಾಯಕ, ವಿನಾಯಕ ಪಾಟೀಲ್, ದೇವು ನಾಯ್ಡ, ಮಹಾಂತೇಶ ಹಿರೇಮಠ, ವೀರಣ್ಣಾ ಬಳ್ಳಾರಿ, ಕಾಶಿನಾಥ ಕೊಟಗೊಣಸಿ, ರೇವಣಸಿದ್ದಪ್ಪ ಮಾಗಿ, ಚಂದ್ರಕಾಂತ ಕುಂಬಾರ, ಉದಯ ಗುನಗಾ, ಬಬನ್ ಕದಂ (ಟೆಕ್ನಿಕಲ್ ಸೆಲ್) ಸೇರಿ ಹಲವರು ಭಾಗವಹಿಸಿದ್ದರು.
ಈ ಕಾರ್ಯಾಚರಣೆ ಜಿಲ್ಲಾ ಎಸ್‌ಪಿ ಎಂ. ನಾರಾಯಣ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಡಿವೈಎಸ್‌ಪಿ ಮಹೇಶ್ ಎಂ.ಕೆ. ಅವರ ಮಾರ್ಗದರ್ಶನದಲ್ಲಿ ನಡೆದಿತ್ತು.

