ʼಕ್ಯಾಂಪಸ್‌ಗಳಲ್ಲಿ ಡ್ರಗ್ಸ್‌ ತಡೆಗೆ ಜಿಲ್ಲಾಧಿಕಾರಿಗಳಿಂದ ದಿಟ್ಟ ಕ್ರಮʼ

ಮಂಗಳೂರು: ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ “ಡ್ರಗ್ಸ್ ತಡೆ ಸಮಿತಿ’ಯನ್ನು ಕಡ್ಡಾಯವಾಗಿ ತಿಂಗಳೊಳಗೆ ರಚಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸೂಚಿಸಿದ್ದಾರೆ. ಸೋಮವಾರ ಮಂಗಳೂರು ಪೊಲೀಸ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ಕ್ಲಬ್, ನಿಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟರ್ ಸಹಭಾಗಿತ್ವದಲ್ಲಿ ಪುರಭವನದಲ್ಲಿ ವಿದ್ಯಾರ್ಥಿಗಳು, ಅವರ ಹೆತ್ತವರು ಹಾಗೂ ಶಿಕ್ಷಣ ಸಂಸ್ಥೆಗಳ ಡ್ರಗ್ಸ್ ತಡೆ ಸಮಿತಿಯ ಸದಸ್ಯರಿಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಇದುವರೆಗೆ ಸಮಿತಿ ರಚನೆಯಾಗದಿದ್ದರೆ ಅಲ್ಲಿ ಕೂಡಲೇ ರಚಿಸಬೇಕು. ವಿದ್ಯಾರ್ಥಿಗಳನ್ನು ಡ್ರಗ್ಸ್ ತಪಾಸಣೆ(ಸ್ಟ್ರೀನಿಂಗ್)ಗೂ ಒಳಪಡಿಸಬೇಕು. ಈ ಬಗ್ಗೆ ಈಗಾಗಲೇ ಮಾರ್ಗಸೂಚಿಯನ್ನು ನೀಡಲಾಗಿದೆ. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಕಾಲೇಜು ಆಡಳಿತ ಮಂಡಳಿಗಳು, ಸಮಾಜ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. 150 ವಿದ್ಯಾರ್ಥಿಗಳು ಪತ್ತೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಸದ್ಯ ನಗರದಲ್ಲಿನ 80ಕಾಲೇಜುಗಳ 150 ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಸುಮಾರು 100 ಕಾಲೇಜುಗಳಲ್ಲಿ ಮಾತ್ರ ಡ್ರಗ್ಸ್ ತಡೆ ಸಮಿತಿ ರಚಿಸಲಾಗಿದೆ. ಆಡಳಿತ ಮಂಡಳಿಯವರು ಈ ಸಮಿತಿಗಳ ಮೂಲಕ ನಿಗಾ ಇಟ್ಟು,ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸ ಬೇಕು. ಹೆತ್ತವರೂ ತಮ್ಮ ಮಕ್ಕಳ ವರ್ತನೆ ಯನ್ನು ಗಮನಿಸುತ್ತಿರಬೇಕು. ಪೊಲೀಸರು ಕಾಲೇಜುಗಳ ಒಳಗೆ ಹೋಗಿ ಕ್ರಮ ಕೈಗೊಳ್ಳುವ ಪರಿಸ್ಥಿತಿ ಬರುವ ಮೊದಲೇ ಆಡಳಿತ ಮಂಡಳಿ ಯವರು ಎಚ್ಚೆತ್ತುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ತಮ್ಮ ಗೆಳೆಯರು, ಸಹಪಾಠಿಗಳು, ಇತರರು ಡ್ರಗ್ಸ್ ಸೇವನೆ, ಪೂರೈಕೆಯಲ್ಲಿ ಪಾಲ್ಗೊಂಡಿದ್ದರೆ ಈ ಬಗ್ಗೆ ಡ್ರಗ್ಸ್ ತಡೆ ಸಮಿತಿ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹಾಗೂ ಚಟುವಟಿಕೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳ ಗುರುತನ್ನು ಗೌಪ್ಯವಾಗಿಡಲಾಗುವುದು.

ಈ ರೀತಿ ಮಾಹಿತಿ ನೀಡಲು ಶಿಕ್ಷಣ ಸಂಸ್ಥೆಗಳಿಗೆ ಈಗಾಗಲೇ ಕ್ಯೂ ಆರ್ ಕೋಡ್ ಒದಗಿಸಲಾಗಿದೆ ಎಂದರು. ಮುಚ್ಚಿಟ್ಟುಕೊಳ್ಳಬೇಡಿ,ಮಾಹಿತಿ ನೀಡಿ ಎಸ್‌ಪಿ ಡಾ| ಅರುಣ್ ಅವರು ಮಾತನಾಡಿ, ಅನೇಕ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳಲ್ಲಿ ಡ್ರಗ್ಸ್ ಚಟುವಟಿಕೆ ನಡೆಯುತ್ತಿದ್ದರೂ ಆಡಳಿತ ಮಂಡಳಿಯವರು ಮುಚ್ಚಿಡುತ್ತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತಿಸದೆ. ಮೊದಲು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳಬೇಕು. ಅದನ್ನು ಮುಚ್ಚಿಡದೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರತಿ ಕಾಲೇಜಿಗೂ ನೋಡೆಲ್ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಹೇಳಿದರು. ವ್ಯಸನ ಮುಕ್ತರಾಗಬಹುದು ಬಾರ್ಕ್ ಡಿಎಡಿಕ್ಷನ್ ಸಂಸ್ಥೆಯ ಸಂಸ್ಥಾಪಕ ಗುರುಪ್ರಸಾದ್ ಮಾತನಾಡಿ, ಕಾಲೇಜಿನಲ್ಲಿ ಕುತೂಹಲಕ್ಕೆ ಆರಂಭಿಸಿದ್ದ ಡ್ರಗ್ಸ್ ಸೇವನೆ ಚಟವಾಗಿ ಬೆಳೆಯಿತು. 17 ವರ್ಷಗಳ ಕಾಲ ಡ್ರಗ್ಸ್ ವ್ಯಸನಿಯಾಗಿ ಅಮೂಲ್ಯ ದಿನಗಳನ್ನು ಕಳೆದುಕೊಂಡೆ. ಸಾಕಷ್ಟು ಹೋರಾಡಿ ಅದರಿಂದ ಮುಕ್ತನಾದೆ. ನಶೆಗಾಗಿ ಯುವಜನತೆ ಜೀವನವನ್ನು ನಾಶ ಮಾಡಿಕೊಳ್ಳ ಬಾರದು. ವ್ಯಸನ ಹೊಂದಿದ್ದರೆ ಸೂಕ್ತ ಚಿಕಿತ್ಸೆ ಪಡೆದು ಅದರಿಂದ ಹೊರಬಹುದು ಎಂದರು. ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥ ಡಾ| ಶ್ರೀನಿವಾಸ್ ಭಟ್, ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿ ಟೆಕ್ಟರ್‌ನ ಮುಖ್ಯಸ್ಥ ವಿನೋದ್ ಅರಾಷ್ಟ್ರ, ಮಾದಕ ದ್ರವ್ಯ ವಿರೋಧಿ ಘಟಕದ ಸದಸ್ಯ ರಾದ ಹೇಮಲತಾ, ರಾಜೇಶ್ವರಿ, ಸುಚಿತ್, ಗೋವಿಂದ ಮಡಿವಾಳ ಉಪಸ್ಥಿತರಿದ್ದರು. ಎಸಿಪಿ ಗೀತಾ ಕುಲಕರ್ಣಿ ಸ್ವಾಗತಿಸಿದರು.ಸಲೀಂ ಅಬ್ಬಾಸ್ ವಂದಿಸಿದರು. ಅಕ್ಷತಾ ಶೆಣೈ ನಿರೂಪಿಸಿದರು.