
ಬೆಂಗಳೂರು: ಹಿರಿಯ ನಟಿ ದಿ.ಬಿ.ಸರೋಜಾ ದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ನಾಳೆ ಅಂತ್ಯಕ್ರಿಯೆ- ಬಿ.ಸರೋಜಾದೇವಿ ಪುತ್ರ ಗೌತಮ್: ”ಅಂತ್ಯಸಂಸ್ಕಾರಕ್ಕೆ ನಾಳೆ ಬೆಳಗ್ಗೆ 11.30ಕ್ಕೆ ಹೊರಡುತ್ತೇವೆ. ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಂನ ದಶವರದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿ-ವಿಧಾನಗಳು ನಡೆಯಲಿವೆ” ಎಂದು ತಿಳಿಸಿದರು.
”ಬೆಳಗ್ಗೆ 8.30ಕ್ಕೆ ತಾಯಿ ನಿಧನರಾದರು. ಮಲ್ಲೇಶ್ವರಂ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಕೊನೆಯ ದಿನಗಳಲ್ಲಿ ಭೇಟಿಯಾಗೋಕೆ ಆಗಲಿಲ್ಲ- ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್: ”ಸರೋಜಾದೇವಿ ನಮ್ಮ ಚಿತ್ರರಂಗದ ಹಿರಿಯ ನಟಿ. ಎಲ್ಲಾ ಭಾಷೆಗಳಲ್ಲೂ ನಟಿಸಿದ್ದ ಮಹಾನಟಿ. ಒಳ್ಳೆಯ ಮನಸ್ಸು. ಎಲ್ಲಾ ವರ್ಗದ ಕಲಾವಿದರನ್ನು ಚೆನ್ನಾಗಿ ಮಾತನಾಡಿಸುತ್ತಿದ್ದವರು. ಕಲಾವಿದರ ಸಂಘದ ಸಭೆಯಲ್ಲೂ ಎಲ್ಲರಿಗೂ ಹಾರೈಸುತ್ತಿದ್ದರು. ನನ್ನ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದಲ್ಲಿ ಸಾಕಷ್ಟು ಸಂತೋಷವಾಗಿದ್ದರು. ಎಲ್ಲರಿಗೂ ಊಟ ಹಾಕಿಸಿದ್ದರು. ಮನೆಗೆ ಬನ್ನಿ ಅಂತಾ ಅನೇಕ ಬಾರಿ ಆಹ್ವಾನಿಸಿದ್ದಾರೆ. ನಾವುಗಳು ಅನೇಕ ಬಾರಿ ಸೇರಿದ್ದೇವೆ. ಒಂದು ತಿಂಗಳ ಹಿಂದೆ ಅವರ ನೆನಪು ಬಹಳ ಕಾಡುತ್ತಿತ್ತು. ಮೂರು ದಿನದ ಹಿಂದೆ ಕರೆ ಮಾಡಿದ್ದೆ, ಆದ್ರೆ ಸಿಕ್ಕಿರಲಿಲ್ಲ. ನಂತರ, ಅವರ ಮಗಳಿಗೆ ಕರೆ ಮಾಡಿ ಮಾತನಾಡಿದ್ದೆ. ಇಂದು ಬೆಳಗ್ಗೆ ಕರೆ ಬಂತು. ಆದ್ರೆ ಈ ವಿಷಯಕ್ಕೆಂಬುದು ತಿಳಿದಿರಲಿಲ್ಲ. ಕೊನೆಯ ದಿನಗಳಲ್ಲಿ ಭೇಟಿಯಾಗೋಕೆ ಆಗಲಿಲ್ಲ ಅನ್ನೋ ಬೇಸರ ಇದೆ” ಎಂದು ಭಾವುಕರಾದರು.
ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು- ಹಿರಿಯ ಹಾಸ್ಯ ನಟ ಉಮೇಶ್: “ಬಹಳ ದುಃಖದ ಸಂಗತಿ. ರಾಜ್, ಲೀಲಾವತಿ, ಸರೋಜಾದೇವಿ ಚಿತ್ರರಂಗದ ಬೇರುಗಳು. ಚಿತ್ರರಂಗವನ್ನು ಸಾಕಷ್ಟು ಬೆಳೆಸಿದ್ರು. ಅವರ ಸಾಕಷ್ಟು ಸಿನಿಮಾಗಳಲ್ಲಿ ನಾನು ನಟಿಸಿದ್ದೆ. ನನ್ನನ್ನು ಕಂಡಾಗಲೆಲ್ಲ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಪಂಚಭಾಷೆಗಳಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ರೂ ಮೃದು ಸ್ವಭಾವದವರಾಗಿದ್ದರು. ಎಲ್ಲಾ ಕಾರ್ಯಕ್ರಮಗಳಲ್ಲಿ ನಗುಮುಖದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಹಾಕಿಕೊಟ್ಟ ತಳಪಾಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬೇಸರದಿಂದ ನುಡಿದರು.
ಮೇರುನಟಿ ಅಷ್ಟೇ ಅಲ್ಲ, ಮೇರು ವ್ಯಕ್ತಿತ್ವ-ನಟಿ ಶ್ರುತಿ: “ಮೊದಲ ಮಹಿಳಾ ಸೂಪರ್ ಸ್ಟಾರ್. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಒಮ್ಮೆ ಟಿವಿ ಲೈವ್ ಕಾರ್ಯಕ್ರಮದಲ್ಲಿ ಕೂತಿದ್ದೆ. ಚಾನೆಲ್ ನಂಬರ್ ತಗೊಂಡು ಕರೆ ಮಾಡಿದ್ರು. ಚೆನ್ನಾಗಿ ನಟಿಸಿದ್ದೀಯಾ, ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀಯಾ ಅಂದಿದ್ರು. ಸಾಕಷ್ಟು ಬಾರಿ ಕರೆ ಮಾಡಿ ಮಾತನಾಡಿದ್ರು. ಮನೆಗೆ ಕರೆದು ಮಾತನಾಡಿಸಿದ್ರು. ಅವರು ಮೇರುನಟಿ ಅಷ್ಟೇ ಅಲ್ಲ, ಮೇರು ವ್ಯಕ್ತಿತ್ವ. ನನಗೆ ಮನೆಗೆ ಕರೆದು ಊಟ ಮಾಡಿಸುತ್ತಿದ್ರು. ಅಮ್ಮ ತುಂಬು ಜೀವನ ಕಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಈ ರಾಜ್ಯದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಅವರಂತ ನಟಿ ಮತ್ತೊಮ್ಮೆ ರಾಜ್ಯದಲ್ಲಿ ಹುಟ್ಟಿಬರಲಿ” ಎಂದು ಕಂಬನಿ ಮಿಡಿದರು.
ಪಂಚಭಾಷಾ ತಾರೆ, ನಟನೆಯಲ್ಲಿ ಅವರಿಗೆ ಅವರೇ ಸಾಟಿ- ಹಿರಿಯ ನಿರ್ದೇಶಕ ಭಾರ್ಗವ: ಸರೋಜಾದೇವಿಯವರು ನಮ್ಮಿಂದ ದೂರವಾಗಿದ್ದು ದುಃಖಕರ ಸಂಗತಿ. ನನ್ನ ಮೊದಲ ಚಿತ್ರದ ನಾಯಕಿ ಅವರು. ರಾಜ್ ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್, ಎನ್ಟಿಆರ್ ಜೊತೆ ನಟಿಸಿದ್ದಾರೆ. ನಟನೆಯಲ್ಲಿ ಅವರಿಗೆ ಅವರೇ ಸಾಟಿ. ಅವರು ಪಂಚಭಾಷಾ ತಾರೆಯಾಗಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
