ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಕಾಂಗ್ರೆಸ್‌ ಸರಕಾರದ ನಿರ್ಲಕ್ಷ್ಯ: ಬಿಜೆಪಿ ಆರೋಪ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾಂಗ್ರೆಸ್ ಸರ್ಕಾರವು ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಯನ್ನು ಮುಂದೂಡುವ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಾರವಾರದ ಕ್ರಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಘೋಷಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಆಸ್ಪತ್ರೆ ವಿಚಾರದಲ್ಲಿ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ಅವರು ಟೀಕಿಸಿದ್ದಾರೆ. 210 ಕೋಟಿ ರೂ. ವೆಚ್ಚದ 300 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆಯ ಪ್ರಸ್ತಾವನೆಯನ್ನು ಸರ್ಕಾರ ಕೈಬಿಟ್ಟಿದೆ.

ಕಾರವಾರ: ರಾಜ್ಯದ ಕಾಂಗ್ರೆಸ್‌ ಸರಕಾರ ಉತ್ತರ ಕನ್ನಡ ಜಿಲ್ಲೆಗೆ ಸದ್ಯಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸಾಧ್ಯವಿಲ್ಲ ಎಂದು ಪ್ರಸ್ತಾವ ಮುಂದೂಡುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ನಾನು ಶಾಸಕಿಯಾಗಿದ್ದಾಗ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸತತ ಪ್ರಯತ್ನ ನಡೆಸಿದ್ದೆ. ಸಾರ್ವಜನಿಕರ ಆಗ್ರಹವೂ ಇದ್ದಿದ್ದರಿಂದ ಅಂದಿನ ಬಿಜೆಪಿ ಸರಕಾರ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಜತೆಗೆ ಕಾರವಾರದ ಕ್ರಿಮ್ಸ್‌ನಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿತ್ತು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಎರಡು ವರ್ಷ ಮುಗಿದರೂ ಆಸ್ಪತ್ರೆ ವಿಚಾರದಲ್ಲಿ ಗಂಭೀರವಾಗಿ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಮ್ಸ್‌ ಆವರಣದಲ್ಲಿ 300 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು 210 ಕೋಟಿ ರೂ. ಯೋಜನೆಗೆ ಮಂಜೂರಾತಿ ಕೋರಿ ಸಲ್ಲಿಸಿದ ಪ್ರಸ್ತಾವನೆಯನ್ನೂ ಕಾಂಗ್ರೆಸ್‌ ಸರಕಾರ ಸದ್ಯಕ್ಕೆ ಕೈ ಬಿಟ್ಟಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ ಸರಕಾರ ಬಂದ ಮೇಲೆ ಎರಡು ಆಸ್ಪತ್ರೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕಾರವಾರದಲ್ಲಿ ಒಂದು ಆಸ್ಪತ್ರೆ ಮಾಡಲೂ ಶಾಸಕರಿಗೆ ಸಾಧ್ಯವಾಗಲಿಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.