
ಕಾರವಾರ: ಗೋಕರ್ಣ ಪೊಲೀಸರು ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಿದ್ದಾರೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ವೀಸಾ ಅವಧಿ ಮುಗಿದಿರುವುದು ಪತ್ತೆಯಾದ ನಂತರ ಅವರನ್ನು ರಷ್ಯಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಮತ್ತು ಅವರ ತಂಡ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಕಾಡಿನೊಳಗಿನ ಗುಹೆಯೊಂದರಲ್ಲಿ ಅಪರಿಚಿತರು ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ಪೊಲೀಸರು ಪರಿಶೀಲಿಸಿದಾಗ, 40 ವರ್ಷದ ರಷ್ಯಾ ಮೂಲದ ನಿನಾ ಕುಟಿನಾ ಎಂಬ ಮಹಿಳೆ ತಮ್ಮ ಆರು ವರ್ಷ ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ.
ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ವಾಸ: ಪೊಲೀಸರ ವಿಚಾರಣೆ ವೇಳೆ, ನಿನಾ ಕುಟಿನಾ ಅವರು ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಬಂದಿದ್ದು, ಗುಹೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಪೊಲೀಸರು, ರಾಮತೀರ್ಥ ಗುಡ್ಡದಲ್ಲಿ ಈ ಹಿಂದೆ ಗುಡ್ಡ ಕುಸಿತ ಸಂಭವಿಸಿದ್ದರಿಂದ ಇದು ಅಪಾಯಕಾರಿ ಪ್ರದೇಶವಾಗಿದೆ. ಅಲ್ಲದೇ, ಹಾವುಗಳು ಸೇರಿದಂತೆ ವಿಷಕಾರಿ ಜಂತುಗಳ ವಾಸವಿರುವ ಕಾರಣ ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮಹಿಳೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಎನ್‌ಜಿಒ ಆಶ್ರಮಕ್ಕೆ ಸ್ಥಳಾಂತರ: ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಗುಹೆಯಿಂದ ಕೆಳಗೆ ಕರೆತಂದಿದ್ದಾರೆ. ನಂತರ ಅವರ ಇಚ್ಛೆಯಂತೆ ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯ ಯೋಗರತ್ನ ಸರಸ್ವತಿ ಸ್ವಾಮೀಜಿಯ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ದಿದ್ದಾರೆ
ವೀಸಾ ಅವಧಿ ಮುಕ್ತಾಯ, ರಷ್ಯಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ: ಆಧ್ಯಾತ್ಮಿಕತೆಯ ಅಭಿಮಾನಿಯಾಗಿರುವ ಈ ವಿದೇಶಿ ಮಹಿಳೆ ಭಾರತದಲ್ಲೇ ಉಳಿಯುವ ಉದ್ದೇಶದಿಂದ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲು ಆರಂಭದಲ್ಲಿ ನಿರಾಕರಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಾಲೋಚನೆ ನಡೆಸಿದಾಗ, ಪಾಸ್‌ಪೋರ್ಟ್ ಮತ್ತು ವೀಸಾ ಕಾಡಿನಲ್ಲಿ ಅಥವಾ ಗುಹೆಯಲ್ಲೇ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.
ಪರಿಣಾಮವಾಗಿ, ತಾಯಿ ಮತ್ತು ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸುರಕ್ಷಿತವಾಗಿ ಇರಿಸಲಾಗಿದೆ. ಈ ನಡುವೆ, ಗೋಕರ್ಣ ಪೊಲೀಸರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ, ಗುಹೆ ಸುತ್ತಮುತ್ತ ವಿದೇಶಿ ಮಹಿಳೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪತ್ತೆಹಚ್ಚಿದ್ದಾರೆ. ಪರಿಶೀಲನೆ ನಡೆಸಿದಾಗ, ವೀಸಾ ಅವಧಿ 17-04-2017 ರಂದು ಮುಕ್ತಾಯವಾಗಿರುವುದು ತಿಳಿದು ಬಂದಿದೆ.
ಈ ಸಂಬಂಧ ಬೆಂಗಳೂರು ಎಫ್‌ಆರ್‌ಆರ್‌ಒ ಕಚೇರಿಯನ್ನು ಸಂಪರ್ಕಿಸಿ ಪತ್ರವ್ಯವಹಾರ ನಡೆಸಲಾಗಿದ್ದು, ವೀಸಾ ಅವಧಿ ಮೀರಿದ ಈ ರಷ್ಯಾ ಮೂಲದ ಮಹಿಳೆ ಮತ್ತು ಮಕ್ಕಳನ್ನು ಮರಳಿ ರಷ್ಯಾಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಅದರಂತೆ, ಜುಲೈ 14 ರಂದು ಮಹಿಳೆ ಮತ್ತು ಮಕ್ಕಳನ್ನು ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಬೆಂಗಳೂರು ಶಾಂತಿನಗರದಲ್ಲಿರುವ ಎಫ್‌ಆರ್‌ಆರ್‌ಒ ಕಚೇರಿಗೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

