ಶಿವಮೊಗ್ಗ: “ಹೊರವಲಯ ರಾಗಿಗುಡ್ಡದ ಬಂಗಾರಪ್ಪ ಕಾಲೊನಿಯಲ್ಲಿ ಶನಿವಾರ ನಡೆದ ವಿಗ್ರಹ ಕಿತ್ತು ದ್ವಂಸಕ್ಕೆ ಯತ್ನದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಯಾರೇ ಆದರೂ ಕಾನೂನಿನ ವಿರುದ್ದ ಕ್ರಮ ತೆಗೆದುಕೊಂಡರೆ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ಎಸ್ಪಿ ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ.

ಅಲ್ಲದೆ ದಲಿತ ದೌರ್ಜನ್ಯದ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೈಯದ್ ಹಾಗೂ ನಿಯಾಮತ್ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಘಟನೆ ಯಾಕೆ ನಡೆದಿದೆ ಎಂದು ತನಿಖೆ ನಡೆಸಲಾಗುತ್ತಿದೆ. ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವವನ ಪಾತ್ರದ ಕುರಿತು ಡಿವೈಎಸ್ಪಿ, ಅಧಿಕಾರಿಗಳು ತಂಡದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಇದು ನಿರ್ಮಾಣ ಹಂತದಲ್ಲಿರುವ ಮನೆಯಾಗಿದ್ದು, ಇಲ್ಲಿ ಯಾರ್ಯಾರೋ ಬಂದು ಹೋಗುತ್ತಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟದ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಾರು ಸಹ ಸುಳ್ಳು ಸುದ್ದಿ ಹಬ್ಬಿಸಬಾರದು. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದೇ ವೇಳೆ ಎಚ್ಚರಿಕೆ ರವಾನಿಸಿದ್ದಾರೆ.
ಅಕ್ರಮ ಕಟ್ಟಡ ಕೆಡವಲು ಮನವಿ: ಪ್ರಕರಣ ನಡೆದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ಕೆಡವಬೇಕು ಎಂದು ಶಾಸಕ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ ನಗರ ಬಿಜೆಪಿ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಶಾಸಕ ಚನ್ನಬಸಪ್ಪ ಅವರು ಮಾತನಾಡಿ, ” ದುಷ್ಕೃತ್ಯ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದೇವೆ. ಆ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದು, ತಮ್ಮ ಮನೆ ಬಾಗಿಲು ಮುಂದೆ ವಿಗ್ರಹಗಳು ಇರಬಾರದು ಎಂದು ಕಿತ್ತು ಚರಂಡಿಗೆ ಹಾಕಿರುವುದು ಅಕ್ಷಮಯ ಅಪರಾಧ. ಕಟ್ಟಡ ಅಕ್ರಮವಾಗಿರುವುದರಿಂದ ಅದನ್ನು ಕೆಡವುವಂತೆ ನಾವು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ನೋಟಿಸ್ ನೀಡಿ ತೆರವು: ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, “ಮಹಾನಗರ ಪಾಲಿಕೆ ವ್ಯಾಪ್ತಿ 8ರಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿರುವಂತಹ ಎರಡು ವಿಗ್ರಹಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದರ ಎದುರು ಭಾಗದಲ್ಲಿ ಒಂದು ಅಪೂರ್ಣವಾಗಿರುವಂತಹ ಕಟ್ಟಡ ಇದೆ. ಇದು ಅಕ್ರಮ ಕಟ್ಟಡವಾಗಿದೆ. ಇದನ್ನು ತೆರವು ಮಾಡಬೇಕೆಂದು ಅನೇಕ ದೂರು ಅರ್ಜಿಗಳು ಸ್ವೀಕೃತವಾಗಿವೆ. ಇದರ ಕುರಿತು ಸರ್ವೇಯರ್, ಕಂದಾಯ ಇನ್ಸ್ಪೆಕ್ಟರ್ ಹಾಗೂ ಇಂಜಿನಿಯರ್ ಅವರಿಂದ ಮಾಹಿತಿ ಪಡೆದುಕೊಂಡಿದ್ದೇವೆ” ಎಂದು ತಿಳಿಸಿದರು.
“ಯಾವುದೇ ಅನಧಿಕೃತ ಕಟ್ಟಡ ಆದರೂ ಸಹ ಪಾಲಿಕೆಯ ಅಧಿನಿಯಮ 187 ವಿಧಿಯ ಅನ್ವಯ ನಾವು ಅದನ್ನು ತೆರವು ಮಾಡಬೇಕಾಗಿರುತ್ತದೆ. ಇದು ಸರ್ವೇ ನಂಬರ್ 172 ರಲ್ಲಿ ಖಾಸಗಿ ನಿರ್ಮಾಣದ ಕಟ್ಟಡವಾಗಿರುತ್ತದೆ. ಅನಧಿಕೃತ ಕಟ್ಟಡ ತೆರವು ಮಾಡುವ ಪ್ರಕ್ರಿಯೆಯನ್ನು ಕಾನೂನಿನಂತೆ ಆದ್ಯತೆ ಮೇರೆಗೆ ಮಾಡುತ್ತೇವೆ. ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತು ಸಿವಿಲ್ ವ್ಯಾಜ್ಯ ಕೋರ್ಟ್ನಲ್ಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ನಾನು ದಾಖಲಾತಿಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಸಾಮಾನ್ಯವಾಗಿ, 187 ರಂತೆ ತೆರವು ಮಾಡಲು 187(1) ರಂತೆ ನೋಟಿಸ್ ನೀಡಬೇಕಾಗುತ್ತದೆ. ಸೂಕ್ತ ದಾಖಲಾತಿಗಳನ್ನು ಪಡೆದು 182(2) ರ ಅನ್ವಯ ಸಂಬಂಧಪಟ್ಟ ಇಂಜಿನಿಯರ್ ವರದಿ ಪಡೆದು ತೆರವು ಮಾಡಲಾಗುತ್ತದೆ” ಎಂದು ಮಾಹಿತಿ ನೀಡಿದರು.
