
ಗಾಂಧೀನಗರ: ಅಹಮದಾಬಾದ್‌ನಲ್ಲಿ ಶುಕ್ರವಾರ ನಡೆದ 148ನೇ ಜಗನ್ನಾಥ ರಥಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ. ಪರಿಣಾಮ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ 10:15 ರ ಸುಮಾರಿಗೆ ರಥಯಾತ್ರೆ ನಗರದ ಖಾದಿಯಾ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಇದ್ದಕ್ಕಿದ್ದಂತೆ ಗುಂಪಿನಿಂದ ದೂರ ಸರಿದು ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿತು. ಕಿರಿದಾದ ಬೀದಿಯಾದ್ದರಿಂದ ಜನರು ಭಯಭೀತರಾದರು. ಇದರ ಜೊತೆ ಇನ್ನೆರಡು ಆನೆಗಳು ಸಹ ಓಡಿದವು. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮಾವತರು ಆನೆಗಳನ್ನು ನಿಯಂತ್ರಿಸಿದರು. ಆನೆಗಳನ್ನು ಕರೆದೊಯ್ದ ಬಳಿಕ ಮೆರವಣಿಗೆ ಮುಂದುವರಿಯಿತು.
ಗಾಯಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಪುರುಷ ಭಕ್ತನನ್ನು ಚಿಕಿತ್ಸೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಖಾಡಿಯಾ ಪ್ರದೇಶದಲ್ಲಿ ಆನೆಗಳು ಗಲಿಬಿಲಿಗೊಂಡ ಕಾರಣ ಅವುಗಳನ್ನು ರಥಯಾತ್ರೆಯಿಂದ ಹೊರಗೆ ಕರೆದೊಯ್ಯಲಾಗಿದೆ. ಮೆರವಣಿಗೆ ವೇಳಾಪಟ್ಟಿಯಂತೆ ಮುಂದುವರೆದಿದೆ ಎಂದು ಅಹಮದಾಬಾದ್ ನಗರ ಪೊಲೀಸರು ತಿಳಿಸಿದ್ದಾರೆ
148ನೇ ರಥಯಾತ್ರೆಯ 16 ಕಿ.ಮೀ. ಮೆರವಣಿಗೆಯು ಶುಕ್ರವಾರ ಮುಂಜಾನೆ ಆರಂಭವಾಯಿತು. ಮೆರವಣಿಗೆಗೆ ಜಮಾಲ್ಪುರದ ಜಗನ್ನಾಥ ದೇವಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳ ಆರತಿ ಮೂಲಕ ಚಾಲನೆ ಕೊಟ್ಟರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಪಾಲ್ಗೊಂಡಿದ್ದರು. ರಾಜ್ಯದ ಐತಿಹಾಸಿಕ ಮತ್ತು ದೊಡ್ಡ ರಥಯಾತ್ರೆಯ ಭದ್ರತೆಗಾಗಿ 23,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

