ಬೆಂಗಳೂರು: ವಿದ್ಯುತ್ ಪೂರೈಕೆ ಮೇಲೆ ತೆರಿಗೆ ವಿಧಿಸುವ ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಕ್ಕೆ ತಿದ್ದಪಡಿ ಮಾಡಿದ್ದ ರಾಜ್ಯ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆೆಸಿಸಿಐ) ಹಾಗೂ ಮೆಸಸ್ ಸೋನಾ ಸಿಂಥೆಟೆಕ್ ಕಂಪೆನಿ ಸೇರಿದಂತೆ ವಿವಿಧ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಸಂವಿಧಾನ ಏಳನೇ ಷಡ್ಯೂಲ್ಡ್ನಲ್ಲಿರುವ ವಿದ್ಯುತ್ ಮೇಲೆ ರಾಜ್ಯ ಸರ್ಕಾರ ಬಳಕೆ ಮತ್ತು ಮಾರಾಟದ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ವಿದ್ಯುತ್ ನಿರಂತರವಾಗಿ ಪೂರೈಕೆ ಮಾಡುವುದರ ಶುಲ್ಕಕ್ಕೆ ತೆರಿಗೆ ವಿಧಿಸಿದರೆ ಅದು ಮಾರಾಟವಾಗದ ಮತ್ತು ಮಾರಾಟ ಮಾಡಿಕೊಳ್ಳಲು ಒಪ್ಪಿಕೊಂಡಿರುವ ವಿದ್ಯುತ್ ಮೇಲಿನ ಶುಲ್ಕಕ್ಕೆ ತೆರಿಗೆ ವಿಧಿಸಿದಂತಾಗಲಿದೆ. ವಿದ್ಯುತ್ ಪೂರೈಕೆ ಎಂದರೆ ಅದು ವಿದ್ಯುತ್ ಮಾರಾಟ ಎಂದು ಅರ್ಥವಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ರಾಜ್ಯ ಸರ್ಕಾರಕ್ಕೆ ವಿದ್ಯುತ್ ಬಳಕೆ ಅಥವಾ ಮಾರಾಟದ ಮೇಲೆ ಮಾತ್ರ ತೆರಿಗೆ ವಿಧಿಸಲು ಅಧಿಕಾರವಿರಲಿದೆ. ಆದರೆ, ಪೂರೈಕೆಯ ಮೇಲೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ವಿದ್ಯುತ್ (ಬಳಕೆಗೆ ಆಧಾರದಲ್ಲಿ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಗೆ ತಂದಿರುವ 2003ರ ತಿದ್ದುಪಡಿ 7 ಮತ್ತು 2004ರ ತಿದ್ದುಪಡಿ 5 ಅನ್ನು ರಾಜ್ಯ ಸರ್ಕಾರ ಮಾಡಿದೆ. ಇದರಿಂದ ವಿದ್ಯುತ್ ಪೂರೈಕೆ ಶುಲ್ಕಕ್ಕೆ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕನಿಷ್ಠ ಸುಂಕವೂ ಸೇರಿ ವಿದ್ಯುತ್ ಶುಲ್ಕದ ಮೇಲಿನ ತೆರಿಗೆಯಾಗಿದ್ದು, ಅದನ್ನು ಈಗಾಗಲೇ ಪಾವತಿಸಲಾಗಿದೆ. ಈ ತಿದ್ದುಪಡಿ ನಿಯಮವು ವಿದ್ಯುತ್ ಪೂರೈಕೆ ಮೇಲೆ ತೆರಿಗೆ ವಿಧಿಸುವ ನಿಯಮ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆೆಸಿಸಿಐ) ಹಾಗೂ ಮೆಸಸ್ ಸೋನಾ ಸಿಂಥೆಟೆಕ್ ಕಂಪೆನಿ ಸೇರಿದಂತೆ ವಿವಿಧ ಕಂಪೆನಿಗಳು ಅರ್ಜಿ ಸಲ್ಲಿಸಿವೆ.
ವಿದ್ಯುತ್ ಪೂರೈಕೆಗಾಗಿ ಕನಿಷ್ಟ ಶುಲ್ಕಗಳ ಮೆಲೆ ತೆರಿಗೆಯನ್ನು ವಿಧಿಸುವುದು ಮತ್ತು ಸಂಗ್ರಹಿಸುವುದು ಕಾನೂನುಬಾಹಿರವಾಗುತ್ತದೆ. ಅಲ್ಲದೆ, ಈ ಹೆಚ್ಚುವರಿ ತರಿಗೆಯನ್ನು ಗ್ರಾಹಕರ ಮೇಲೆ ವಿಧಿಸಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಅನ್ಯಾಯವಾಗಿ ವಿದ್ಯುತ್ ಪೂರೈಕೆಯ ಮೇಲೆ ಸಂಗ್ರಹಿಸಿರುವ ತೆರಿಗೆಯನ್ನು ಹಿಂದಿರುಗಿರುಗಿಸಲು ಸೂಚನೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.
ಈ ಹಿಂದೆ ಕಾಯಿದೆಯ ಪ್ರಕಾರ ವಿದ್ಯುತ್ ಬಳಕೆಯ ಮೇಲೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿತ್ತು. ಅದಕ್ಕೆ ತಿದ್ದುಪಡಿ ಮಾಡಿ ವಿದ್ಯುತ್ ಬಳಕೆ ಮೇಲೆ ವಿಧಿಸುವ ಶುಲ್ಕದ ಮೇಲೆ ತೆರಿಗೆ ವಿಧಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಿದ್ದುಪಡಿಯಾದ ಬಳಿಕ ವಿದ್ಯುತ್ ಶುಲ್ಕಗಳ ಮೇಲೆ ಶೇ.5ರಷ್ಟು ವಿದ್ಯುತ್ ತೆರಿಗೆ ವಿಧಿಸಬೇಕು ಎಂಬುದಾಗಿ ಬದಲಾವಣೆ ಮಾಡಿಲಾಗಿದೆ. ಇದು ಕಾನೂನುಬಾಹಿರವಾಗಿದ್ದು, ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ರಾಜ್ಯ ಸರ್ಕಾರವು, ಗ್ರಾಹಕರು ಬಳಕೆ ಮಾಡಿದ ವಿದ್ಯುತ್ಗೆ ತೆರಿಗೆ ವಿಧಿಸಬಹುದಾಗಿದೆ. ಆದರೆ, ಪೂರೈಕೆ ಮಾಡಿದ ವಿದ್ಯುತ್ಗೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ. ಜೊತೆಗೆ, ಪೂರೈಕೆ ಮಾಡಿದ ಎಲ್ಲ ತೆರಿಗೆಯನ್ನು ಗ್ರಾಹಕ ಬಳಸಬೇಕು ಎಂಬ ನಿಯಮವೂ ಇಲ್ಲ. ಹೀಗಾಗಿ, ಪೂರೈಕೆ ಮಾಡುವ ವಿದ್ಯುತ್ಗೆ ಬದಲಾಗಿ ಬಳಕೆ ಮಾಡಿದ ವಿದ್ಯುತ್ಗೆ ಮಾತ್ರ ತೆರಿಗೆ ವಿಧಿಸಬೇಕು. ವಿದ್ಯುತ್ ಸರಬರಾಜು ಮಾಡುವ ವಿತರಕರು ಹಾಗೂ ಪರವಾನಿಗೆದಾರರು ಸುಂಕವನ್ನು ವಿಧಿಸುತ್ತಾರೆ. ಈ ಸುಂಕವು ಮಾರಾಟದ ಸುಂಕವಲ್ಲ. ವಿತರಣೆಗೆ ಸಂಬಂಧಿಸಿದ ಸುಂಕವಾಗಿದ್ದು, ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಜೊತೆಗೆ, ರಾಜ್ಯ ಸರ್ಕಾರಕ್ಕೆ ಈ ರೀತಿಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಅವಕಾಶವಿಲ್ಲ” ಎಂದು ಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲರು, ”ರಾಜ್ಯ ಸರ್ಕಾರಕ್ಕೆ ಕಾಯಿದೆ ತಿದ್ದುಪಡಿ ಮಾಡುವುದಕ್ಕೆ ಅವಕಾಶವಿದೆ. ಪ್ರಸ್ತುತ ವಿಧಿಸಿರುವ ಪೂರೈಕೆ ಶುಲ್ಕವು ಬಳಕೆದಾರರಿಗೆ ವಿಧಿಸುರುವುದರಿಂದ ಅದನ್ನು ಹಿಂದಿರುಗಿಸಲು ಅವಕಾಶವಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು” ಎಂದು ಪೀಠವನ್ನು ಕೋರಿದ್ದರು.
ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಈಗಾಗಲೇ ಸಂಗ್ರಹಿಸಿರುವ ತೆರಿಗೆಯನ್ನು ಹಿಂದಿರುಗಿಸುವಂತೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದು, ವಿದ್ಯುತ್ ಪೂರೈಕೆಯ ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ವಿಧಿಸಿದ್ದ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಿಸಿದೆ.
