ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ; ಬಿಜೆಪಿ ನಾಯಕರ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ 

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೇ, ಸೂಸೈಡ್ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಬರೆದಿರುವ ಪೋಸ್ಟರ್​​ಗಳನ್ನು ಸಾರ್ವಜನಿಕ ಶೌಚಾಲಯದ ಗೋಡೆಗೆ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಮತ್ತಿತರರ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಹೈಗ್ರೌಂಡ್ಸ್ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ನಗರದ 42ನೇ ಎಸಿಜೆಎಂ ಕೋರ್ಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ) ವಿಚಾರಣೆ ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ರವಿಕುಮಾರ್ ಮತ್ತು ಉಮೇಶ್ ಶೆಟ್ಟಿ ಸೇರಿದಂತೆ 12 ಮಂದಿ ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿ, ಹೈಗ್ರೌಂಡ್ಸ್ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗುತ್ತಾ 2024ರ ಡಿಸೆಂಬರ್​ 31ರಂದು ಬೆಳಗ್ಗೆ 10 ಗಂಟೆಗೆ ಮಾಧವನಗರ ಜಂಕ್ಷನ್ ಬಳಿಕೆ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಕಾಯರ್ತಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಗುಂಪುಗೂಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಮಾಧವ ನಗರ ಜಂಕ್ಷನ್​ನಲ್ಲಿ ಸಾರ್ವಜನಿಕ ಶೌಚಾಲಯದ ಗೋಡೆಗೆ ‘ಸೂಸೈಡ್ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆದಿರುವ ಪೋಸ್ಟರ್​​ಗಳನ್ನು ಅನಧಿಕೃತವಾಗಿ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹೈಗ್ರೌಂಡ್ಸ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಛಲವಾದಿ ಸೇರಿದಂತೆ ಮತ್ತಿತರ ಬಿಜೆಪಿ ನಾಯಕರು ಹೈಕೋರ್ಟ್ ಮೆಟ್ಟಿಲೇರಿದ್ದರು.