ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿಯನ್ನು ತಳ್ಳಿಕೊಂಡು ಅತಿಕ್ರಮವಾಗಿ ಟರ್ಮಿನಲ್ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1 ನಿರ್ಗಮನ ದ್ವಾರ ಸಂಖ್ಯೆ 8ರಲ್ಲಿ ಜೂನ್ 17ರ ರಾತ್ರಿ ಈ ಘಟನೆ ನಡೆದಿದೆ. ಜಮ್ಮು ಕಾಶ್ಮೀರ ಮೂಲದ 22 ವರ್ಷದ ಸಾದದ್ ಮಹಮ್ಮದ್ ಬಾಬಾ ಇಂಡಿಗೋ ವಿಮಾನ ಸಂಖ್ಯೆ 6ಇ-6288ರಲ್ಲಿ ಬೆಂಗಳೂರಿನಿಂದ ದಕ್ಷಿಣ ಶ್ರೀನಗರಕ್ಕೆ ಪ್ರಯಾಣಿಸಲು ಏರ್ಪೋರ್ಟ್ಗೆ ಬಂದಿದ್ದ. ಆಗ ಟರ್ಮಿನಲ್ 1ರ ನಿರ್ಗಮನ ದ್ವಾರ ಸಂಖ್ಯೆ 8ರಲ್ಲಿ ಅತಿಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದಾನೆ. ಈ ವೇಳೆ ಸಿಐಎಸ್ಎಫ್ ಸಿಬ್ಬಂದಿಯಾದ ನಿರಂಜನ್ ಸಿಂಗ್ ಹಾಗೂ ವೆಲ್ಲಿಸ್ವಾಮಿ ಆರೋಪಿಯನ್ನು ತಡೆದಿದ್ದಾರೆ. ಆದರೆ ಸಿಬ್ಬಂದಿಯನ್ನು ತಳ್ಳಿಕೊಂಡು ಟರ್ಮಿನಲ್ ಪ್ರವೇಶಿಸಲು ಯತ್ನ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.
ಸರ್ಕಾರಿ ನೌಕರರ ಸಾರ್ವಜನಿಕ ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಸಿಐಎಸ್ಎಫ್ ಸಿಬ್ಬಂದಿ ಪ್ರಯಾಣಿಕನ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
