ನವದೆಹಲಿ: ಅಮೆರಿಕದ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ 5 ತಿಂಗಳ ನಂತರ ಭಾರೀ ಏರಿಕೆಯಾಗಿದೆ.

ಒಂದು ಬ್ಯಾರೆಲ್ (159 ಲೀಟರ್) ಕಚ್ಚಾ ತೈಲ ಜನವರಿ ನಂತರ ಏರಿಕೆ ಕಂಡಿದೆ. ಇಂದು 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದಬೆಲೆ 1.92 ಡಾಲರ್ ಅಥವಾ 2.49 % ಏರಿಕೆಯಾಗಿ 78.93 ಡಾಲರ್(6,847 ರೂ.) ತಲುಪಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು 1.89 ಡಾಲರ್ ಅಥವಾ 2.56% ಏರಿಕೆಯಾಗಿ 75.73 ಡಾಲರ್(6,570 ರೂ.) ತಲುಪಿದೆ.
ಇರಾನಿನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿ ನಾಶ ಮಾಡಿದೆ. ಅಮೆರಿಕ ದಾಳಿಯ ಬೆನ್ನಲ್ಲೇ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ.
ಇರಾನ್ ಮತ್ತು ಒಮಾನ್ ನಡುವಿನ 40 ಕಿ.ಮೀ ಅಗಲದ ಸಮುದ್ರದಲ್ಲಿ ಹಡಗುಗಳು ಸಂಚರಿಸುತ್ತವೆ. ಹಡಗುಗಳು ಸಂಚರಿಸುವ ಈ ಜಾಗಕ್ಕೆ ಹಾರ್ಮುಜ್ ಜಲಸಂಧಿ ಎಂದು ಕರೆಯಲಾಗುತ್ತದೆ.
ಒಂದು ತಿಂಗಳಿನಲ್ಲಿ 3 ಸಾವಿರಕ್ಕೂ ಅಧಿಕ ಕಾರ್ಗೋ ಶಿಪ್‌ಗಳು ಈ ಜಲಸಂಧಿಯನ್ನು ಬಳಸುತ್ತಿದೆ. ಇರಾನ್ ಈಗ ಈ ಜಲಸಂಧಿಯನ್ನೇ ಬಂದ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಕಚ್ಚಾ ತೈಲ ದರ ದಿಢೀರ್ ಏರಿಕೆಯಾಗಿದೆ.
ಇರಾಕ್, ಸೌದಿ ಅರೇಬಿಯಾ, ಯುಎಇ, ಕತಾರ್‌ನಿಂದ ಬರುವ ಕಚ್ಚಾ ತೈಲ, ಎಲ್‌ಎನ್‌ಜಿ ಹೊತ್ತುಕೊಡು ಬರುವ ಹಡಗುಗಳು ಹಾರ್ಮುಜ್ ಜಲಸಂಧಿಯಿಂದಲೇ ಬರಬೇಕು.
