
ಬೆಂಗಳೂರು: ಐಶ್ವರ್ಯಾ ಗೌಡ ಮೇಲಿನ ಚಿನ್ನದ ವ್ಯಾಪಾರಿಗೆ 9.82 ಕೋಟಿ ರೂ. ವಂಚಿಸಿದ ಆರೋಪ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಬಮೂಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡಿ.ಕೆ.ಸುರೇಶ್ ಅವರೊಂದಿಗೆ ಬೆಂಬಲಿಗರು ಬರುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಂತಿನಗರದ ಇ.ಡಿ ಕಚೇರಿಯ ಬಳಿ 50 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೂನ್ 19ರಂದು ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಸುರೇಶ್ ಅವರಿಗೆ ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರು. ಆದರೆ ಇಂದು (ಜೂನ್ 23) ಹಾಜರಾಗುವುದಾಗಿ ಡಿ.ಕೆ.ಸುರೇಶ್ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: ತಾನು ಡಿ.ಕೆ.ಸುರೇಶ್ ಅವರ ಸಹೋದರಿ, ಅನೇಕ ರಾಜಕೀಯ ನಾಯಕರ ಪರಿಚಯವಿದೆ ಎಂದು ನಂಬಿಸಿ ಸಾಲದ ರೂಪದಲ್ಲಿ ಚಿನ್ನ ಪಡೆದು ವಂಚಿಸಿದ ಆರೋಪ ಐಶ್ವರ್ಯಾ ಗೌಡ ವಿರುದ್ಧ ಕೇಳಿ ಬಂದಿತ್ತು. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಎಂಬವರು ನೀಡಿದ್ದ ದೂರಿನ ಅನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ.ಎನ್. ಹಾಗೂ ನಟ ಧರ್ಮೇಂದ್ರ ಬಿ. ಅವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು ಐಶ್ವರ್ಯಾ ಗೌಡ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದ್ದರು.
