ಆಪರೇಷನ್ ಸಿಂಧು – ಯುದ್ಧ ಪೀಡಿತ ಇರಾನ್‌ನಿಂದ 11 ಕನ್ನಡಿಗರು ವಾಪಸ್

ಬೆಂಗಳೂರು: ಯುದ್ಧ ಪೀಡಿತ ಇರಾನ್‌ನಿಂದ 11 ಕನ್ನಡಿಗರನ್ನು ಆಪರೇಷನ್ ಸಿಂಧು ಕಾರ್ಯಾಚರಣೆ ಮೂಲಕ ವಾಪಸ್ ಕರೆದುಕೊಂಡು ಬರಲಾಗಿದೆ.

ಶನಿವಾರ ಮಧ್ಯರಾತ್ರಿ ಟೆಹ್ರಾನ್ ನಿಂದ ದೆಹಲಿಗೆ 11 ಕನ್ನಡಿಗರು ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ ತಲುಪಲಿದ್ದಾರೆ. ವಿದ್ಯಾರ್ಥಿಗಳ ವಿಮಾನ ಪ್ರಯಾಣದ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ.

ಜೂ.19ರಂದು ಇರಾನ್‍ನಿಂದ ಹೊರಟಿದ್ದ 110 ವಿದ್ಯಾರ್ಥಿಗಳು ದೆಹಲಿ ತಲುಪಿದ್ದರು. ವಿದ್ಯಾರ್ಥಿಗಳು ಇರಾನ್‍ನಿಂದ ಅರ್ಮೇನಿಯಾದ ಮೂಲಕ ಭಾರತಕ್ಕೆ ಬಂದಿದ್ದರು. ಅದರಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ವಿದ್ಯಾರ್ಥಿಗಳು ದೆಹಲಿಗೆ ಬಂದಿಳಿದಿದ್ದರು. ಅದೇ ದಿನ ಐದು ಮಂದಿ ಕನ್ನಡಿಗರು ಸಹ ವಾಪಸ್‌ ಆಗಿದ್ದರು.

ಸಂಘರ್ಷದಿಂದ ಇಸ್ರೇಲ್‍ನಲ್ಲಿ ಸಿಲುಕಿದ್ದ 18 ಕನ್ನಡಿಗರು ಜೂ.19ರಂದು ಬೆಂಗಳೂರಿಗೆ ಆಗಮಿಸಲಿದ್ದರು. ಬಿ-ಪ್ಯಾಕ್ ಸದಸ್ಯರ ಕನ್ನಡಿಗರ ತಂಡ ಅಧ್ಯಯನ ಪ್ರವಾಸಕ್ಕೆ ಹೋಗಿತ್ತು. ಇಸ್ರೇಲ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಹಿನ್ನೆಲೆ ಅಲ್ಲೇ ಉಳಿದಿದ್ದರು. ಈಗಾಗಲೇ ಈ ತಂಡ ಕರ್ನಾಟಕಕ್ಕೆ ವಾಪಸ್‌ ಆಗಿದೆ.

ಇರಾನ್‌ – ಇಸ್ರೇಲ್‌ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಇಸ್ರೇಲ್‌ ಪರ ಅಮೆರಿಕ ಅಧಿಕೃತವಾಗಿ ಯುದ್ಧಕ್ಕೆ ಧುಮುಕಿದ್ದು, ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿಯಾಗಿ ದಾಳಿ ನಡೆಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.