
ಬೆಂಗಳೂರು: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ. ಹೀಗಾಗಿ ಕರ್ನಾಟವೂ ಈ ಆಚರಣೆಯಿಂದ ಹೊರತಾಗಿಲ್ಲ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಂದು ಸಾವಿರಾರು ಯೋಗಪಟುಗಳಿಂದ ಯೋಗಭಾಸ್ಯ ನಡೆಯಿತು. ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.
ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಎನ್ನುವ ಧ್ಯೇಯವಾಕ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಶುರುವಾಗಿ 8:30ರ ವರೆಗೆ ಯೋಗ ಪ್ರದರ್ಶನ ನಡೆಯಿತು. ಹಿರಿಯ ರಾಜಕೀಯ ನಾಯಕರೂ ಸೇರಿ ವಿವಿಧ ಸಂಸ್ಥೆಯ ಯೋಗಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.
ಬಳಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಕನ್ನಡದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಭಾಷಣ ಶುರು ಮಾಡಿದರು.
ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ಎಲ್ಲರ ಕಲ್ಯಾಣ ಮಾಡೋ ಭಾವನೆ ಆಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಯೋಗ ದಿನ ಉತ್ತಮವಾಗಿ ಆಚರಣೆ ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ. ಯೋಗ ಜೀವನವನ್ನ ಪರಿಪೂರ್ಣ ಮಾಡುತ್ತದೆ. ʻಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗʼ ಅನ್ನೋ ಘೋಷ ವಾಕ್ಯ ಉತ್ತಮವಾಗಿದೆ ಎಂದರಲ್ಲದೇ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.
ಯೋಗದಿಂದ ಶಾಂತಿ ಸಿಗಲಿದೆ. ನಾನು ಚಿಕ್ಕವನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡ್ತೀನಿ. ಜನರಿಗೆ ಮನವಿ ಮಾಡ್ತೀನಿ. ಎಲ್ಲರು ನಿತ್ಯ ಯೋಗಾಭ್ಯಾಸ ಮಾಡಿ. ಯೋಗ ಜೀವನದ ಭಾಗವಾಗಿ ಸ್ವೀಕಾರ ಮಾಡೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡುವಂತೆ ಕರೆ ಕೊಟ್ಟರು.

ವಿಧಾನಸೌಧದ ಎದುರು ಯೋಗ ಮಾಡಿದ ನಟಿ ಸಾನ್ಯಾ ಅಯ್ಯರ್
ನಟಿ ಸಾನ್ಯಾ ಅಯ್ಯರ್ ಕೂಡ ಯೋಗ ದಿನಾಚರಣೆಯಲ್ಲಿ ಭಾಗಿ ಆದರು. ಅವರು ಯೋಗ ಮಾಡಿದ್ದು ಗಮನ ಸೆಳೆಯಿತು. ಸಾನ್ಯಾ ಅಯ್ಯರ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರಿಗೆ ಬಿಗ್ ಬಾಸ್ ಸಾಕಷ್ಟು ಜನಪ್ರಿಯತೆ ನೀಡಿತು. ಆ ಬಳಿಕ ‘ಗೌರಿ’ ಹೆಸರಿನ ಸಿನಿಮಾದಲ್ಲಿ ನಟಿಸಿದರು.
