ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಪಾವತಿಸುವಂತೆ ಒತ್ತಾಯಿಸಿ ರೈತರು ಇಲ್ಲಿನ ಜಿಲ್ಲಾಡಳಿತ ಭವನದೆದುರು ಗುರುವಾರ ಪ್ರತಿಭಟನೆ ನಡೆಸಿದರು.

ಕಳೆದ ಒಂದು ವರ್ಷದಿಂದ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸಿದ ರೈತರ ಬಿಲ್ ಹಾಗೂ ಬಾಕಿ ಹಣ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರಾದ ಮುತ್ತಪ್ಪ ಕೋಮಾರ್, ಈರಣ್ಣ ಹಂಚಿನಾಳ ಹಾಗೂ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದರು.
ಜಿಲ್ಲಾಡಳಿತ ಭವನದೊಳಗೆ ಹೋಗಲು ಪೊಲೀಸರು ತಡೆಯೊಡ್ಡಿದ್ದರಿಂದ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಸರಿಸಿ ಒಳನುಗ್ಗಿದರು. ಜಿಲ್ಲಾಡಳಿತ ಭವನದ ಪ್ರಮುಖ ದ್ವಾರದಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ಜಿಲ್ಲಾಧಿಕಾರಿ ಸಂಗಪ್ಪ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಕುರೇರ್ ಹಾಗೂ ಎಸ್.ಪಿ ಅಮರನಾಥ ರೆಡ್ಡಿ, ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಜಿಲ್ಲಾ ಪಂಚಾಯತ್ ಮಿನಿ ಸಭಾಭವನದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ, “ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳ ಪೈಕಿ ನಾಲ್ಕು ಕಾರ್ಖಾನೆಯವರು ಮಾತ್ರ ಬಿಲ್ ನೀಡದೆ ಬಾಕಿ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಅವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ವೇಳೆ, ರೈತ ಮುಖಂಡ ಈರಣ್ಣ ಹಂಚಿನಾಳ, “ಜಿಲ್ಲಾ ಉಸ್ತುವಾರಿ, ಸಕ್ಕರೆ ಸಚಿವರು ಹಾಗೂ ಸಕ್ಕರೆ ಆಯುಕ್ತರು ಏನು ಮಾಡುತ್ತಿದ್ದಾರೆ?. ಅವರೊಂದಿಗೆ ಮಾತನಾಡಿ ಸಭೆ ನಡೆಸಲು ದಿನಾಂಕ ನಿಗದಿಗೊಳಿಸಿ. ಅಲ್ಲಿಯವರೆಗೆ ನಾವು ಇಲ್ಲೇ ಹೋರಾಟ ಮಾಡುತ್ತೇವೆ. ಸಕ್ಕರೆ ಕಾರ್ಖಾನೆಯವರು ಸುಮಾರು 450 ಕೋಟಿಗೂ ಅಧಿಕ ಹಣ ಪಾವತಿಸಬೇಕಾಗಿದೆ. ರೈತರು ಸಾಲ ಮಾಡಿ, ಬಡ್ಡಿ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, “ನಾನು ಇದೇ ಜಿಲ್ಲೆಯವನು. ರೈತಾಪಿ ವರ್ಗದ ಮನೆಯಿಂದ ಬಂದಿದ್ದೇನೆ. ರೈತರ ಸಮಸ್ಯೆ ಬಗ್ಗೆ ಗೊತ್ತಿದೆ. ಇವತ್ತು ಅಧಿಕಾರಿ ಸ್ವೀಕರಿಸಿದ್ದೇನೆ. ಸ್ವಲ್ಪ ಕಾಲಾವಕಾಶ ನೀಡಿ” ಎಂದು ಮನವಿ ಮಾಡಿದರು.
ಇದರಿಂದ ತೃಪ್ತರಾಗದ ರೈತರು, ಈಗಲೇ ದಿನಾಂಕ ಕೊಡಬೇಕು ಎಂದು ಪಟ್ಟು ಹೀಡಿದಾಗ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಧಿಕಾರಿ ಚರ್ಚಿಸಿ, ರೈತರ ಮನವೊಲಿಸಿದರು.
“ಸೋಮವಾರದವರೆಗೆ ಸಮಯಾವಕಾಶ ಕೊಡಿ. ಸಕ್ಕರೆ ಆಯುಕ್ತರನ್ನು ಸಂಪರ್ಕಿಸಿ, ದಿನಾಂಕ ನಿಗದಿಗೊಳಿಸಿದ ಬಳಿಕ ನಿಮಗೆ ಹೇಳುತ್ತೇವೆ” ಎಂದು ತಿಳಿಸಿದಾಗ ರೈತರು ಒಪ್ಪಿಗೆ ಸೂಚಿಸಿದರು.
ಸೋಮವಾರ ದಿನಾಂಕ ನಿಗದಿ ಮಾಡಬೇಕು. ಇಲ್ಲವೇ ಮತ್ತೆ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಸಭೆ ಮುಗಿಸಿದರು.


