527 ಕೋಟಿ ರೂಪಾಯಿ ವೆಚ್ಚದ ಹೆದ್ದಾರಿ ಉದ್ಘಾಟನೆಯಾದ 1ತಿಂಗಳಲ್ಲೇ ಬಿರುಕು 

ಶಿವಮೊಗ್ಗ – ಉದ್ಘಾಟನೆಯಾಗಿ ಕೇವಲ ಒಂದೇ ತಿಂಗಳಲ್ಲಿ ಹೆದ್ದಾರಿ ಕಾಮಗಾರಿಯ ಬಣ್ಣ ಬಯಲಾಗಿದೆ. 527 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೆದ್ದಾರಿ ಬಿರುಕು ಬಿಟ್ಟಿದೆ. ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13 ಬಿರುಕುಬಿಟ್ಟಿದೆ. ಉದ್ಘಾಟನೆಗೊಂಡು ಒಂದೇ ತಿಂಗಳಿಗೆ ರಸ್ತೆ ಕುಸಿದಿರುವುದು ಕಾಮಗಾರಿಯ ಅಸಲಿ ಬಣ್ಣ ಬಯಲಾಗಿದೆ. ಒಂದೇ ಮಳೆಗೆ ರಸ್ತೆಯ ಕಳಪೆ ಕಾಮಗಾರಿ ಬಟಾ ಬಯಲಾಗಿದೆ.

106 ಕಿ.ಮೀ ರಾಷ್ಟ್ರೀಯ ಹೆದ್ದಾರಿ 13 ನಿರ್ಮಾಣ ಮಾಡಲಾಗಿದೆ. ಈ ಹೆದ್ದಾರಿ ಸಲುವಾಗಿ ಸುಮಾರು 80 ಕೋಟಿ ವೆಚ್ಚದಲ್ಲಿ ಹೊಳೆಹೊನ್ನೂರಿನ ಬಳಿ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಕಳೆದ ತಿಂಗಳು ಸಂಸದ ಬಿ.ವೈ ರಾಘವೇಂದ್ರ ಅವರು ರಾಷ್ಟ್ರೀಯ ಹೆದ್ದಾರಿ 13 ಅನ್ನು ಲೋಕಾರ್ಪಣೆಗೊಳಿಸಿದ್ದರು. ಇದೀಗ ಹೆದ್ದಾರಿ ಬಿರುಕುಬಿಟ್ಟಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಮತ್ತು ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡಿನ ಭಾಗದ ಜನರು ಈ ಹೆದ್ದಾರಿ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಉತ್ತಮ ಹೆದ್ದಾರಿ ಓಡಾಟಕ್ಕೆ ಸಿಕ್ಕಿತು ಎಂದು ಖುಷಿ ಪಟ್ಟಿದ್ದರು. ಆದರೆ, ಹೆದ್ದಾರಿ ಬಿರುಕು ಬಿಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ಇನ್ನು ಭದ್ರಾ ಸೇತುವೆ ಮೇಲೆ ಗ್ರಾಮಸ್ಥರು ನಿತ್ಯ ಓಡಾಡುತ್ತಾರೆ. ಸೇತುವೆಯ ತಡೆಗೋಡೆ ಕೂಡ ಕಳಪೆಯಿಂದ ಕೂಡಿದ್ದು, ಬೀಳುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಸಾಕ್ಷಿಯಾಗಿದೆ. ಹೆದ್ದಾರಿ ನಿರ್ಮಾಣ ಮಾಡಿದ ಗುತ್ತಿಗೆದಾರರ ಮತ್ತು ಎಂಜಿನಿಯರ್​ಗಳ ವಿರುದ್ಧ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.