ಫಿನಿಕ್ಸ್ ಶೂಟಿಂಗ್ ವೇಳೆ ಅವಘಡ – ‘ಪೆಟ್ರೋಲ್ ಬಾಂಬ್ ಎಸೆತಕ್ಕೆ ಭಾಸ್ಕರ್ ಶೆಟ್ಟಿಗೆ ಗಾಯ’

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ `ಫಿನಿಕ್ಸ್’ ಮೂಡಿಬರುತ್ತಿದೆ. ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಸದ್ಯ ಬೆಂಗಳೂರಿನ ವಡೇರಹಳ್ಳಿಯಲ್ಲಿ ನಡೆಯುತ್ತಿದೆ. ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ವೇಳೆ ಭಾರೀ ಅನಾಹುತವೊಂದು ನಡೆದಿದೆ.

ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಭಾಸ್ಕರ್ ಶೆಟ್ಟಿ ಅವರ ಕಾಲಿಗೆ ಬೆಂಕಿ ತಗುಲಿದ್ದು, ಅಲ್ಲಿದ್ದವರ ಸಮಯ ಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾಲಿಗೆ ಪೆಟ್ಟಾಗಿದ್ದು, ಭಾಸ್ಕರ್ ಶೆಟ್ಟಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

ಫಿನಿಕ್ಸ್ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ವಿಲನ್ ಅನ್ನು ಹಿಡಿಯಲು ನಾನು ಅವನಿರುವ ಸ್ಥಳಕ್ಕೆ ಹೋಗುತ್ತೇನೆ. ಆಗ ಅಲ್ಲಿದವರು ನನ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಸನ್ನಿವೇಶದ ಚಿತ್ರೀಕರಣ ಸಂದರ್ಭ. ಈ ಸಂದರ್ಭದಲ್ಲಿ ನನ್ನ ಕಾಲಿಗೆ ಪೆಟ್ಟಾಯಿತು. ತಕ್ಷಣ ಚಿತ್ರತಂಡದವರು ನನ್ನ ಆರೈಕೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆಗಿರುವ ಓಂಪ್ರಕಾಶ್ ರಾವ್ ಅವರು ಸಹ ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಅವರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ ನಟ ಭಾಸ್ಕರ್ ಶೆಟ್ಟಿ.

ಫಿನಿಕ್ಸ್ ಓಂಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರವಾಗಿದ್ದು, ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಭಾಸ್ಕರ್ ಶೆಟ್ಟಿ, ನಿಮಿಕಾ ರತ್ನಾಕರ್, ಕಾಕ್ರೋಜ್ ಸುಧೀ, ಪ್ರಸನ್ನ ಮುಂತಾದವರು ತಾರಾಬಳಗದಲ್ಲಿದ್ದಾರೆ. ರವಿ ವಲ್ಲೂರಿ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜಿಸಲಿದ್ದಾರೆ.