ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ದಕ್ಷಿಣ ಚಿತ್ರರಂಗದ ಖ್ಯಾತ ತಾರೆಯರಾದ ರಶ್ಮಿಕಾ ಮಂದಣ್ಣ, ಧನುಷ್ ಹಾಗೂ ನಾಗಾರ್ಜುನ ಅಕ್ಕಿನೇನಿ ಅಭಿನಯದ ‘ಕುಬೇರ’ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಬಹುನಿರೀಕ್ಷಿತ ಚಿತ್ರದ ಈ ಒಂದು ತುಣುಕು ಮಹತ್ವಾಕಾಂಕ್ಷೆ, ಅಧಿಕಾರ ಮತ್ತು ನೈತಿಕತೆ ಮುಖಾಮುಖಿಯಾಗುವ ಪ್ರಪಂಚದ ಒಂದು ತೀವ್ರ ನೋಟವನ್ನೊದಗಿಸಿದೆ.

ಈ ಪ್ಯಾನ್ ಇಂಡಿಯಾ ಚಿತ್ರವನ್ನು ‘ಡಾಲರ್ ಡ್ರೀಮ್ಸ್’ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದು, ಜೂನ್ 20ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕ್ರೈಂ ಡ್ರಾಮಾದಲ್ಲಿ ಸೌತ್ ಸೂಪರ್ ಸ್ಟಾರ್ಸ್ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟ್ರೇಲರ್ ಪ್ರಕಾರ, ಧನುಷ್ ಚಿತ್ರದಲ್ಲಿ ನಾಗಾರ್ಜುನರಿಂದ ಮಾರ್ಗದರ್ಶನ ಪಡೆದ ಭಿಕ್ಷುಕನ ಪಾತ್ರ ನಿರ್ವಹಿಸಿದ್ದಾರೆ. ನಾಗಾರ್ಜುನ ಪ್ರಭಾವಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ದೇಶ ಕಾನೂನು ಮತ್ತು ನಿಯಮಗಳಿಂದಲ್ಲ, “ಹಣ” ಹಾಗೂ “ಅಧಿಕಾರ”ದಿಂದ ಮಾತ್ರ ನಡೆಸಲ್ಪಡುತ್ತದೆ ಎಂದು ನಂಬಿದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
”ಈ ದೇಶದಲ್ಲಿ ದುಡ್ಡು ಪವರೇ ಕೆಲಸ ಮಾಡುತ್ತೆ, ನ್ಯಾಯ ನೀತಿ ಅಲ್ಲ! ಇದು ಚರಿತ್ರೆ” ಅನ್ನೋ ನಾಗಾರ್ಜುನ ಅವರ ಡೈಲಾಗ್ ಟ್ರೇಲರ್ನ ಹೈಲೆಟ್. ನಂತರ, ಟ್ರೇಲರ್ ನಾಗಾರ್ಜುನ, ಜಿಮ್ ಸರ್ಭ್ ಮತ್ತು ಸರ್ಕಾರದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಬಿಚ್ಚಿಟ್ಟಿದೆ, ಅವರು ಧನುಷ್ರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ಬಹುಶಃ ಅವರ ಹಣ ಮತ್ತು ದುರಾಸೆಯ ಆಟವನ್ನು ಅಡ್ಡಿಪಡಿಸುವ ಶಕ್ತಿ ಧನುಷ್ರಲ್ಲಿದೆ ಎಂದು ತೋರುತ್ತದೆ.
ಟ್ರೇಲರ್‌ನಲ್ಲಿ ತೋರಿಸಿರುವಂತೆ, ಚಿತ್ರದಲ್ಲಿ ಧನುಷ್ ಅವರ ಪ್ರೇಯಸಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಶ್ರೀಮಂತರು ಮತ್ತು ಪ್ರಭಾವಿಗಳ ಪವರ್ ಬಗ್ಗೆ ಧನುಷ್‌ಗೆ ಎಚ್ಚರಿಕೆ ನೀಡುವ ಮೂಲಕ ರಶ್ಮಿಕಾ ಮಂದಣ್ಣ ಅವರ ಪಾತ್ರವು ಭಾವನಾತ್ಮಕವಾಗಿ ದುರ್ಬಲವಾಗಿ ಕಾಣಿಸಿಕೊಂಡಿದೆ.
ದೇವಿ ಶ್ರೀ ಪ್ರಸಾದ್ ಅವರ ಸಂಗೀತವು ಟ್ರೇಲರ್ಗೊಂದು ನಿಗೂಢ ಸ್ಪರ್ಶ ನೀಡಿದೆ. ಟ್ರೇಲರ್ ನೋಡಿದ ನಂತರ ಪ್ರೇಕ್ಷಕರಲ್ಲಿ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು ಉಳಿಯುತ್ತವೆ. ಹೀಗೆ ಟ್ರೇಲರ್ ಕುತೂಹಲ ಮೂಡಿಸಿದ್ದು, ಸಂಪೂರ್ಣ ಕಥೆ ಏನೆಂಬುದನ್ನು ತಿಳಿಯಲು ಸಿನಿಪ್ರಿಯರು ಉತ್ಸುಕರಾಗಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ಗಳ ಅಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕೂರ್ ರಾಮ್ ಮೋಹನ್ ರಾವ್ ಜಂಟಿಯಾಗಿ ನಿರ್ಮಿಸಿದ್ದಾರೆ. ಸಿನಿಮಾ ಇದೇ ಶುಕ್ರವಾರ ತೆರೆಕಾಣಲಿದೆ.
ಸೌತ್ ಸೂಪರ್ ಸ್ಟಾರ್ ಧನುಷ್ ಕೊನೆಯ ಬಾರಿಗೆ ‘ರಾಯನ್’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವನ್ನು ಅವರೇ ಬರೆದು ನಿರ್ದೇಶಿಸಿದ್ದರು. ಮುಂದೆ ರಾಂಜಾನಾ ಚಿತ್ರದ ಸೀಕ್ವೆಲ್ ‘ತೇರೆ ಇಷ್ಕ್ ಮೇ’ ಚಿತ್ರದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಆನಂದ್ ಎಲ್ ರೈ ನಿರ್ದೇಶನದಲ್ಲಿ ಮೂಡಿ ಬರಲಿದೆ. ಇನ್ನೂ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ಸಲ್ಮಾಲ್ ಖಾನ್ ಜೊತೆ ಸಿಕಂದರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
