ತಾಲೂಕಿನಲ್ಲಿ ಮುಂದುವರಿದ ಮಳೆಯ‌ ಅಬ್ಬರ-ಹೈಗುಂದದಲ್ಲಿ ಗುಡ್ಡ ಕುಸಿತ

ಹೊನ್ನಾವರ ಜೂ5: ತಾಲೂಕಿನ ಮಳೆಯ ಅಬ್ಬರದ ನಡುವೆ, ಗುಡ್ಡಕುಸಿತದ ಆತಂಕವು ಸಾಲುಸಾಲು ಎದುರಾಗುತ್ತಿದೆ. ಗ್ರಾಮೀಣ ಭಾಗವಾದ ಹೈಗುಂದದ ಸಮೀಪ ಭೂಕುಸಿತ ಸಂಭವಿಸಿದೆ.

ಭೂಕುಸಿತ ಮುಂದುವರೆದಲ್ಲಿ ಹೈಗುಂದ ದೇವಸ್ಥಾನಕ್ಕೂ ಅಪಾಯದ ಸಾಧ್ಯತೆ ಇರುವುದರಿಂದ ಭಕ್ತಾದಿಗಳಲ್ಲಿ ಆತಂಕ ಎದುರಾಗಿದೆ.

ಈ ಭಾರಿಯ ಮುಂಗಾರಿನ ಆರಂಭದಲ್ಲಿ ಹೆಚ್ಚಿನ ಭೂಕುಸಿತ ಸಂಭವಿಸುತ್ತಿರುದರಿಂದ ಮಳೆ ಮುಂದುವರೆದಲ್ಲಿ ಇನ್ನಷ್ಟು ಭಾಗದಲ್ಲಿ ಕುಸಿತ ಸಂಭವಿಸುವ ಆತಂಕವಿದೆ. ಈಗಾಗಲೇ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತಾಲೂಕಿನ ಜನತೆ ಅಕ್ಷರಶಃ ಕಂಗಾಲಾಗಿದ್ದಾರೆ‌. ಮಳೆಯ ಆರ್ಭಟದ ನಡುವೆ ಜೋರಾಗಿ ಬೀಸುವ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿವೆ. ಆರಂಭದ ಮಳೆಗೆ ಇಷ್ಟೆಲ್ಲಾ ಅವಾಂತರ ತಂದೊಡ್ಡಿರುವ ಮಳೆರಾಯ ಮುಂದಿನ ದಿನಗಳಲ್ಲಿ ಮತ್ತೇನೇನು ಅವಾಂತರ ಆಗುವುದು ಎಂದು ಜನರು ಆತಂಕದಲ್ಲಿದ್ದಾರೆ…