ಟೀಮ್ ಇಂಡಿಯಾಗೆ ಹೊಸ ಕೋಚ್ ನೇಮಕ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸುವಲ್ಲಿ ನಿರತವಾಗಿದೆ. ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ತಂಡ ಲಂಡನ್​ನಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ ಈ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕಾಣಿಸಿಕೊಂಡಿಲ್ಲ.

ಗಂಭೀರ್ ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆ ಗೌತಮ್ ಗಂಭೀರ್ ಭಾರತಕ್ಕೆ ಮರಳಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಅಭ್ಯಾಸ ಮುಂದುವರೆಸಿದ್ದು, ಈ ವಾರ ಗೌತಮ್ ಗಂಭೀರ್ ಇಂಗ್ಲೆಂಡ್​ಗೆ ಮರಳದಿದ್ದರೆ ಹಂಗಾಮಿ ಕೋಚ್​ನ ನೇಮಕ ಮಾಡಲಿದ್ದಾರೆ.

ಹೊಸ ಕೋಚ್ ಯಾರು?

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ಹಿಂತಿರುಗುತ್ತಿದ್ದಂತೆ, ಬಿಸಿಸಿಐ  ವಿವಿಎಸ್​ ಲಕ್ಷ್ಮಣ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸಿದ್ದಾರೆ. ಅಲ್ಲದೆ ಜೂನ್ 20 ರೊಳಗೆ ಗಂಭೀರ್​ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಪರಿಸ್ಥಿತಿ ಇರದಿದ್ದರೆ, ಭಾರತ ತಂಡವು ಲಕ್ಷ್ಮನ್ ಮುಂದಾಳತ್ವದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂತ್ರಗಳನ್ನು ರೂಪಿಸಲಿದೆ.

ಈಗಾಗಲೇ ವಿವಿಎಸ್ ಲಕ್ಷ್ಮಣ್ ಅವರು ಇಂಗ್ಲೆಂಡ್​ನಲ್ಲಿರುವ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ಮತ್ತು ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದ ವೇಳೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ವಿವಿಎಸ್​ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ.

ಹೀಗಾಗಿ ಗೌತಮ್ ಗಂಭೀರ್ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ಕೋಚಿಂಗ್ ಜವಾಬ್ದಾರಿ ಲಕ್ಷ್ಮಣ್ ಅವರ ಹೆಗಲೇರುವುದು ಖಚಿತ ಎನ್ನಬಹುದು. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾದ ಮಾಜಿ ಕೊಚ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಕೋಚ್ ಆಗಿ ಲಕ್ಷ್ಮಣ್ ಕಾಣಿಸಿಕೊಂಡಿದ್ದರು.

ಹಾಗಾಗಿ ಜೂನ್ 20 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿವಿಎಸ್​ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

  • ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
  • 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್​ಹ್ಯಾಮ್
  • 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
  • 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
  • 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್.