ಆಗುಂಬೆ ಘಾಟಿಯಲ್ಲಿ ಜೂನ್ 15ರಿಂದ ಅಕ್ಟೋಬರ್ 30ರ ತನಕ ಭಾರಿ ವಾಹನ ಸಂಚಾರ ನಿಷೇಧ

ಶಿವಮೊಗ್ಗ: ಮುಂಗಾರು ಮಳೆ ಜೋರಾಗಿದೆ. ಆಗುಂಬೆ ಘಾಟಿಯ ಅಲ್ಲಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆ ಇರುವುದರಿಂದ ಜೂನ್ 15ರಿಂದ ಅಕ್ಟೋಬರ್ 30ರ ವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಈ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು (ಜಲ್ಲಿ ಮತ್ತು ಸರಕು ತುಂಬಿದ ವಾಹನಗಳು) ನಿಷೇಧಿಸಲಾಗಿದೆ. ಕೇವಲ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬದಲಿ ಮಾರ್ಗ: ಶಿವಮೊಗ್ಗ ಜಿಲ್ಲೆಯಿಂದ ಕರಾವಳಿಗೆ ಸಂಪರ್ಕ‌ಕ್ಕೆ ಆಗುಂಬೆ ಘಾಟಿಯ ಬದಲಿಗೆ, ತೀರ್ಥಹಳ್ಳಿ, ಉಂಟೂರು ಕಟ್ಟೆ, ಕೈಮರ, ಮಾಸ್ತಿಕಟ್ಟೆ, ಸಿದ್ದಾಪುರ, ಕುಂದಾಪುರದ ಮೂಲಕ ಉಡುಪಿ ತಲುಪಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಡುಪಿ ಜಿಲ್ಲೆಯ ಸೋಮೇಶ್ವರ ಮೇಲ್ಭಾಗದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರವನ್ನು‌ ಜೂನ್ 15ರಿಂದ ಅಕ್ಟೋಬರ್ 30ರ ತನಕ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.