
ಲಂಡನ್, ಇಂಗ್ಲೆಂಡ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ನ ನಾಲ್ಕನೇ ದಿನವಾದ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ನಿರ್ಣಾಯಕವಾಗಿದೆ. ಕ್ರಿಕೆಟ್ ತವರು ಲಾರ್ಡ್ಸ್ ಮೈದಾನದಲ್ಲಿ ಇಂದು ಆಸ್ಟ್ರೇಲಿಯಾ ತಂಡವನ್ನು ದಕ್ಷಿಣ ಆಫ್ರಿಕಾ ಸೋಲಿಸಿ 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಗೆಲ್ಲುವ ದಡದಲ್ಲಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 212 ರನ್ ಗಳಿಸಿತ್ತು. ಬಳಿಕ ದಕ್ಷಿಣ ಆಫ್ರಿಕಾ ಕೂಡ ಕೇವಲ 138 ರನ್‌ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕಾಂಗರೂ ಪಡೆ ಕೇವಲ 207 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಹರಿಣಗಳಿಗೆ 282 ರನ್‌ಗಳ ಗುರಿ ನೀಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲಲು ದಕ್ಷಿಣ ಆಫ್ರಿಕಾ 282 ರನ್‌ಗಳ ಗುರಿ ಬೆನ್ನಟ್ಟಿದ್ದು, ಮೂರನೇ ದಿನ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ಇನ್ನು ಇಂದು ನಾಲ್ಕನೇ ದಿನ 69 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಗೆ ಮುತ್ತಿಕ್ಕಲಿದೆ. ಇನ್ನು ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾಗೆ ನಿರಾಸೆಯಾಗಲಿದೆ.
ನಾಲ್ಕನೇ ದಿನ ಹೇಗಿರಲಿದೆ ಹವಾಮಾನ?: WTC ಫೈನಲ್ನ ನಿರ್ಣಾಯಕ ದಿನವಾದ ನಾಲ್ಕನೇ ದಿನದ ಹವಾಮಾನವು ಆಟಕ್ಕೆ ಅಡ್ಡಿಯಾಗಬಹುದು ಎಂದು ವರದಿಯಾಗಿದೆ. ದಿನದ ಆರಂಭದಲ್ಲಿ ಸ್ವಲ್ಪ ಬಿಸಿಲು ಬೀಳುವ ನಿರೀಕ್ಷೆಯಿದೆ. ಆದರೆ, ಆಟ ಮುಂದುವರೆದಂತೆ, ಮೋಡಗಳು ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು ಆವರಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ, ತಾಪಮಾನವು 29 ಡಿಗ್ರಿಗೆ ಇಳಿಯುವ ನಿರೀಕ್ಷೆಯಿದೆ. ಆದರೆ, ಶೇಕಡಾ 91 ರಷ್ಟು ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಚಾಂಪಿಯನ್‌ಶಿಪ್ ಟ್ರೋಫಿ ಜಯದ ದಡದಲ್ಲಿ ದಕ್ಷಿಣ ಆಫ್ರಿಕಾ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲಲ್ಲು ದಕ್ಷಿಣ ಆಫ್ರಿಕಾಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 282 ರನ್ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ (6 ರನ್) ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೀಡಾಗಿತ್ತು. ಆದರೆ, ಐಡೆನ್ ಮಾರ್ಕ್ರಾಮ್ (107) ಅವರ ಭರ್ಜರಿ ಶತಕ ಮತ್ತು ಟೆಂಬಾ ಬವುಮಾ (65) ಅವರ ಅರ್ಧಶತಕದ ನೆರವಿನಿಂದ ತಂಡ ಮೂರನೇ ದಿನದಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ.
ಐಡೆನ್ ಮಾರ್ಕ್ರಾಮ್ ಮತ್ತು ಟೆಂಬಾ ಬವುಮಾ ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದ್ದಾರೆ. ಇಂದು 69 ರನ್ ಗಳಿಸಿ ಐಸಿಸಿ ಟೆಸ್ಟ್ ಚಾಂಪಿಯನ್ ಆಗುವ ತವಕದಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. ಈ ಮೂಲಕ 27 ವರ್ಷಗಳ ನಂತರ ಐಸಿಸಿ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾ ಎತ್ತಿಹಿಡಿಯಲಿದೆ.



