ದಾವಣಗೆರೆ: ಸಿಸೇರಿಯನ್ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ದುರ್ಗಮ್ಮ (21) ಎಂಬವರೇ ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹರಪನಹಳ್ಳಿ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗು ಜನಿಸಿತ್ತು. ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪೋಷಕರ ಆರೋಪವೇನು?: “ಹೆರಿಗೆಗಾಗಿ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ಮಗಳನ್ನು ದಾಖಲು ಮಾಡಿದ್ದೆವು. ಸಿಸೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಆದರೆ ಹೆರಿಗೆ ಬಳಿಕ ಹೊಲಿಗೆ ಹಾಕುವ ವೇಳೆ ವೈದ್ಯರು ಎಡವಟ್ಟು ಮಾಡಿದ್ದಾರೆ. ನಂತರ ನಿಮ್ಮ ಮಗಳ ಆರೋಗ್ಯ ಸ್ಥಿತಿ ಚಿಂತಾಜನಕವಿದೆ ಎಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ 12 ಬಾಟಲ್ ರಕ್ತ ಸೇರಿಸಿದ್ದರು. ಗರ್ಭಕೋಶ ಹೊರತೆಗೆಯಬೇಕೆಂದರು. ಆದರೆ, ಎಲ್ಲಾ ಮಾಡಿದರೂ ನಮ್ಮ ಮಗಳು ಉಳಿಯಲಿಲ್ಲ. ರಕ್ತ ಇಲ್ಲ, ರಕ್ತಸ್ರಾವ ಆಗುತ್ತಿದೆ ಎಂದು ಏನೂ ಹೇಳಲಿಲ್ಲ. ನಮಗೆ ನೋಡಲು ಕೂಡ ಬಿಡಲಿಲ್ಲ. ಹರಪನಹಳ್ಳಿ ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಗಳು ಸಾವನಪ್ಪಿದ್ದಾಳೆ” ಎಂದು ಮೃತರ ತಾಯಿ ಹುಲಿಗೆಮ್ಮ ಆರೋಪಿಸಿದ್ದಾರೆ.
ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿ, “ಬಾಣಂತಿಗೆ ಸ್ವಚ್ಛಗೊಳಿಸದೆ ಹೊಲಿಗೆ ಹಾಕಿದ್ದಾರೆ. ಅಲ್ಲದೆ ಎರಡು ಹೊಲಿಗೆ ಬಿಡುವಷ್ಟು ಜಾಗವನ್ನು ಬಿಟ್ಟಿದ್ದಾರಂತೆ. ಇದರಿಂದ ದುರ್ಗಮ್ಮನ ಗರ್ಭಕೋಶದಿಂದ ತೀವ್ರ ರಕ್ತಸ್ರಾವವಾಗಿದ್ದು, ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಈ ವೇಳೆ ಆಕೆಯ ಪತಿ ನಾರಾಯಣ್ ವೈದ್ಯರು ಮತ್ತು ಸಿಬ್ಬಂದಿಗೆ ಮನವಿ ಮಾಡಿಕೊಂಡರೂ ಯಾರೂ ಸ್ಪಂದಿಸಿಲ್ಲ. ಮಾರನೇ ದಿನ ದುರ್ಗಮ್ಮಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆಯೆಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ತಕ್ಷಣ ಚಿಗಟೇರಿ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಆದರೂ ದುರ್ಗಮ್ಮ ಬದುಕಿಲ್ಲ” ಎಂದು ಹರಪನಹಳ್ಳಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ತಪ್ಪಿತಸ್ಥರಿಗೆ ತಕ್ಕ ಕಾನೂನು ಶಿಕ್ಷೆ ಆಗಬೇಕು. ಜೊತೆಗೆ ಹಸುಗೂಸಿಗೆ ಸಮರ್ಪಕ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕ ಡಾ. ಎಂ.ಬಿ.ನಾಗೇಂದ್ರಪ್ಪ ಸ್ಪಷ್ಟನೆ: ವೈದ್ಯಕೀಯ ಅಧೀಕ್ಷಕ ಡಾ.ಎಂ.ಬಿ. ನಾಗೇಂದ್ರಪ್ಪ ಅವರು ಮಾದ್ಯಮದೊಂದಿಗೆ ಮಾತನಾಡಿ “ಸಿಸೇರಿಯನ್ ಬಳಿಕ ರಕ್ತಸ್ರಾವ ಆಗಿದ್ದರಿಂದ ಬಾಣಂತಿ ಮೃತಪಟ್ಟಿದ್ದಾರೆ. ಗುರುವಾರ (ಜೂ.12) ಹರಪನಹಳ್ಳಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಮಧ್ಯಾಹ್ನ ಚಿಗಟೇರಿಗೆ ಬಾಣಂತಿ ದಾಖಲಾಗಿದ್ದರು. ನಾವು ಮತ್ತೊಮ್ಮೆ ಶಸ್ರ್ರಚಿಕಿತ್ಸೆ ಮಾಡಿ ಗರ್ಭಕೋಶ ತೆಗೆದಿದ್ದೇವೆ. ಇಲ್ಲಿಗೆ ಬರುವಷ್ಟರಲ್ಲಿ ಬಾಣಂತಿಯ ಬಿಪಿ ಇಳಿಕೆಯಾಗಿತ್ತು. ಸುಮಾರು ಐದು ಬಾಟಲ್ ರಕ್ತ, 15 ಯೂನಿಟ್ ರಕ್ತದ ಪ್ಲೇಟ್‌ಲೆಟ್ ಕೊಟ್ಟಿದ್ದೇವೆ. ಶುಕ್ರವಾರ ಬೆಳಗಿನಜಾವ ಒಂದು ಗಂಟೆಗೆ ಬಾಣಂತಿ ಮೃತಪಟ್ಟಿದ್ದಾರೆ. ರಕ್ತಸ್ರಾವ ತಡೆಯುವುದಕ್ಕೋಸ್ಕರ ಗರ್ಭಕೋಶ ತಗೆದು ಹಾಕಿದ್ದೆವು. ರಾಜ್ಯಮಟ್ಟದಲ್ಲಿ ಬಾಣಂತಿ ಸಾವಿನ ಬಗ್ಗೆ ವಿಚಾರಣೆ ಆಗುತ್ತದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ” ಎಂದು ತಿಳಿಸಿದ್ದಾರೆ.

