
ಕಾರವಾರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಒಂದೊಂದಾಗಿ ಬಯಲಾಗುತ್ತಿವೆ. ಮನುಷ್ಯನ ಆರೋಗ್ಯದ ಮೇಲೆ ಮಾತ್ರವಲ್ಲದೆ, ಜಲಚರಗಳ ಬದುಕಿಗೂ ಇದು ಕಂಟಕವಾಗಿ ಪರಿಣಮಿಸಿದೆ ಎಂಬುದಕ್ಕೆ ಕಾರವಾರದಲ್ಲಿ ಇಂದು ಪತ್ತೆಯಾದ ಡಾಲ್ಫಿನ್ ಸಾವು ಸ್ಪಷ್ಟ ನಿದರ್ಶನವಾಗಿದೆ. ಪ್ಲಾಸ್ಟಿಕ್ ಸೇವನೆಯಿಂದಲೇ ಅಪರೂಪದ ಡಾಲ್ಫಿನ್ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಠಾಗೋರ್ ಕಡಲತೀರದಲ್ಲಿ ನಡೆದಿದ್ದು, ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ವಿಷಯ.
ಪ್ಲಾಸ್ಟಿಕ್ ಪರಿಸರ ಮತ್ತು ಆರೋಗ್ಯ ಎರಡಕ್ಕೂ ಹಾನಿಕಾರಕವಾದ ವಸ್ತು. ಇದು ಮಣ್ಣು, ನೀರು ಮತ್ತು ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಕ್ಯಾನ್ಸರ್, ಥೈರಾಯ್ಡ್, ಅಸ್ತಮಾ ಮತ್ತು ಹೃದಯರೋಗದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪ್ಲಾಸ್ಟಿಕ್ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸರ್ಕಾರ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಅನೇಕ ಕಾನೂನುಗಳನ್ನು ಜಾರಿಗೊಳಿಸಿದ್ದರೂ, ಅದರ ಬಳಕೆ ಮಾತ್ರ ಕಡಿಮೆಯಾಗಿಲ್ಲ.
ಕಾರವಾರದ ಠಾಗೋರ್ ಕಡಲತೀರದಲ್ಲಿ ಎರಡು ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ಡಾಲ್ಫಿನ್ ದೇಹ ಇಂದು ತೀರಕ್ಕೆ ಬಂದು ತಲುಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಡಾಲ್ಫಿನ್ ದೇಹವನ್ನು ಪರಿಶೀಲಿಸಿದಾಗ ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ಡಾಲ್ಫಿನ್ ಹೊಟ್ಟೆಯೊಳಗೆ ಪ್ಲಾಸ್ಟಿಕ್ನಿಂದ ಮಾಡಿದ ಮೀನುಗಾರಿಕೆ ಬಲೆಯ ತುಂಡುಗಳ ಮುದ್ದೆ ಪತ್ತೆಯಾಗಿವೆ.
“ಡಾಲ್ಫಿನ್ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಬಲೆಯ ತುಂಡುಗಳು ಸಿಕ್ಕಿವೆ. ಇದು ಪ್ಲಾಸ್ಟಿಕ್ ಸೇವನೆಯಿಂದಲೇ ಡಾಲ್ಫಿನ್ ಸಾವನ್ನಪ್ಪಿದೆ ಎಂಬುದನ್ನು ಸೂಚಿಸುತ್ತದೆ. ಜಿಲ್ಲೆಯ ಕಡಲತೀರದಲ್ಲಿ ಆಗಾಗ ಪತ್ತೆಯಾದ ಪ್ರಕರಣಗಳಲ್ಲಿ ಪ್ಲಾಸ್ಟಿಕ್ ಸೇವನೆ ಸಾವಿಗೆ ಕಾರಣವಾಗಿದೆ. ಇದಲ್ಲದೆ ಯಾವುದಾದರು ಬಂಡೆ ಇಲ್ಲವೇ ಹಡಗುಗಳಿಗೆ ಡಿಕ್ಕಿಯಾಗಿ ಸಾವನ್ನಪ್ಪುತ್ತವೆ. ಇದರ ಜೊತೆಗೆ ಕಡಲಾಮೆ, ಮೀನುಗಳು ಸೇರಿದಂತೆ ಜಲಚರಗಳು ಇದರ ದುಷ್ಪರಿಣಾಮ ಎದುರಿಸುತ್ತಿವೆ. ಪ್ಲಾಸ್ಟಿಕ್ ಬಳಕೆ ನಿವಾರಣೆ ಬಗ್ಗೆ ಜನ ಜಾಗೃತರಾಗಬೇಕು” ಎಂದು ಕಾರವಾರದ ಅರಣ್ಯ ಅಧಿಕಾರಿ ಕೆ.ಡಿ.ನಾಯ್ಕ್ ಮನವಿ ಮಾಡಿದರು.
“ಇನ್ನು ಜಲಚರಗಳು ಪ್ಲಾಸ್ಟಿಕ್ ಸೇವಿಸುವುದರಿಂದ ಪರೋಕ್ಷವಾಗಿ ಪ್ಲಾಸ್ಟಿಕ್ ಮನುಷ್ಯರ ದೇಹ ಸೇರುವ ಸಾಧ್ಯತೆಯೂ ಇದೆ. ಪ್ಲಾಸ್ಟಿಕ್ ತಿಂದ ಜಲಚರಗಳನ್ನು ಮನುಷ್ಯರು ಸೇವಿಸಿದರೆ, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕಾರವಾರದಲ್ಲಿ ಪತ್ತೆಯಾದ ಡಾಲ್ಫಿನ್ “ಹಂಪ್ ಬ್ಯಾಕ್” ತಳಿಯದ್ದಾಗಿದ್ದು, ಪ್ರತಿ ವರ್ಷ ಕರಾವಳಿಯಲ್ಲಿ ಇಂತಹ ಅನೇಕ ಡಾಲ್ಫಿನ್‌ಗಳ ಮೃತದೇಹಗಳು ಸಿಗುತ್ತಿವೆ. ಕೆಲವು ಡಾಲ್ಫಿನ್‌ಗಳು ಬೋಟ್‌ಗಳಿಗೆ ತಗುಲಿ ಅಥವಾ ಕಲ್ಲುಬಂಡೆಗಳಿಗೆ ಸಿಕ್ಕಿ ಸಾವನ್ನಪ್ಪುತ್ತಿದ್ದರೆ, ಇತ್ತೀಚೆಗೆ ಅನೇಕ ಡಾಲ್ಫಿನ್‌ಗಳ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗುತ್ತಿದ್ದು, ಪ್ಲಾಸ್ಟಿಕ್ ಸೇವನೆಯಿಂದಲೇ ಅವು ಸಾವನ್ನಪ್ಪುತ್ತಿವೆ” ಎಂದು ಕಡಲಜೀವಿಗಳ ಪರಿಣತ ಯೋಗೇಂದ್ರ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಲಿಗೆ ಪ್ಲಾಸ್ಟಿಕ್ ನಿಷೇಧ ಸೇರದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪ್ರತಿ ವರ್ಷವೂ ಕಡಲತೀರ ದಿನಾಚರಣೆ ವೇಳೆ ಜನರಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಪ್ಲಾಸ್ಟಿಕ್ ಕಡಲಿಗೆ ಸೇರುವುದು ಮಾತ್ರ ನಿಂತಿಲ್ಲ. ಸದ್ಯ ಪ್ಲಾಸ್ಟಿಕ್ ಸೇವನೆಯಿಂದ ಜಲಚರಗಳು ಸಾವನ್ನಪ್ಪುತ್ತಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಇಟ್ಟುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಪರಿಸರವನ್ನು ಕಾಣಬಹುದು ಎನ್ನುತ್ತಾರೆ ಅಧಿಕಾರಿಗಳು.
