
2024 ಜೂನ್ 11. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕನ್ನಡದ ಖ್ಯಾತ ನಡ ಅರೆಸ್ಟ್ ಆದ ದಿನ. ಕೊಲೆ ಪ್ರಕರಣವೊಂದರ ಆರೋಪ ಹೊತ್ತು ನಟ ಬಂಧನಕ್ಕೊಳಗಾಗಿದ್ದಾರೆಂಬ ಸುದ್ದಿ ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಚಿತ್ರರಂಗದವರಿಗೂ ನುಂಗಲಾರದ ತುತ್ತಾಗಿತ್ತು. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಅಂತಿಮವಾಗಿ 2024ರ ಡಿಸೆಂಬರ್ಗೆ ನಟ ಜಾಮೀನು ಪಡೆದರು. ಇದೀಗ ಅಭಿಮಾನಿಗಳು ಅವರ ಮುಂದಿನ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ.

ದರ್ಶನ್ ಪ್ರಕರಣದ ಮಾಹಿತಿ:
- 2024ರ ಜೂನ್ 11ರಂದು ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ ಅರೆಸ್ಟ್.
- ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿ 17 ಆರೋಪಿಗಳು ಅರೆಸ್ಟ್.
- ಕೊಲೆ ಪ್ರಕರಣದ ಆರೋಪ ಹೊತ್ತ ದರ್ಶನ್ ತಂಡ.
- 2024ರ ಜೂನ್ 8ರಂದು ನಡೆದಿತ್ತು ರೇಣುಕಾಸ್ವಾಮಿ ಕೊಲೆ.
- ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿರುವ ಆರೋಪವಿದ್ದು, ಈ ಹಿನ್ನೆಲೆ ಕೊಲೆ.
- ಜೂನ್ 11ರಂದು ದರ್ಶನ್ ತಂಡ ಅರೆಸ್ಟ್.
- ಮೊದಲು ದರ್ಶನ್ ಸೇರಿದಂತೆ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.
- ನಂತರ, ಜೈಲಿನಿಂದ ದರ್ಶನ್ ಫೋಟೋಗಳು ವೈರಲ್ ಆದವು.
- ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂತು.
- ರಾಜಾತಿಥ್ಯ ಆರೋಪದ ಹಿನ್ನೆಲೆ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.
- ನಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಯಿತು.
- ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕೆಲವು ಬಾರಿ ವಿಚಾರಣೆ ನಡೆದಿದೆ.
- ದರ್ಶನ್ ಪತ್ನಿ ಮತ್ತು ಸಹೋದರನ ಜೊತೆಗೆ ಖ್ಯಾತ ನಟ ಧನ್ವೀರ್ ಅವರು ಕೋರ್ಟ್ ಮತ್ತು ಜೈಲಿನ ಬಳಿ ಹಲವು ಬಾರಿ ಕಾಣಿಸಿಕೊಂಡು ಸುದ್ದಿಯಾದರು.
- 2024ರ ಅಕ್ಟೋಬರ್ 30ರಂದು ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಯಿತು.
- ವೈದ್ಯಕೀಯ ಕಾಣಗಳ ಆಧಾರದ ಮೇಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು.
- ಡಿಸೆಂಬರ್ ಕೊನೆಗೆ ಹೈಕೋರ್ಟ್ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಪೂರ್ಣಾವಧಿ ಜಾಮೀನು ಮಂಜೂರು ಮಾಡಿತು.
- ಈ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
- ವಿಚಾರಣೆ ಮುಂದುವರಿದಿದೆ.
- ದರ್ಶನ್, ಪವಿತ್ರಾ ಗೌಡ ಈಗಾಗಲೇ ಹಲವು ಬಾರಿ ಕೋರ್ಟ್ಗೆ ಹಾಜರಾಗಿದ್ದಾರೆ.
ಮಾರ್ಚ್ 12ಕ್ಕೆ ಡೆವಿಲ್ ಚಿತ್ರೀಕರಣ ಪುನರಾರಂಭ: ಚಾಲೆಂಜಿಂಗ್ ಸ್ಟಾರ್ನ ಮುಂಬರುವ ಚಿತ್ರ “ದಿ ಡೆವಿಲ್”. 2024ರ ಕ್ರಿಸ್ಮಸ್ಗೆ ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತ ಹಿನ್ನೆಲೆ, ನಾಯಕ ನಟ ಬಹುದಿನಗಳವರೆಗೆ ಸೆರೆವಾಸ ಅನುಭವಿಸಬೇಕಾಯಿತು. ಡಿಸೆಂಬರ್ನಲ್ಲಿ ಜಾಮೀನು ಪಡೆದ ನಟ, ಮಾರ್ಚ್ನಲ್ಲಿ ತಮ್ಮ ಚಿತ್ರವನ್ನು ಪುನರಾರಂಭಿಸಿದರು. ಹೌದು, ಮಾರ್ಚ್ 12ರಂದು ದರ್ಶನ್ ಮತ್ತು ಚಿತ್ರತಂಡ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿತ್ರೀಕರಣದಲ್ಲಿ ಮತ್ತೆ ಪಾಲ್ಗೊಂಡರು. ಚಿತ್ರೀಕರಣವೀಗ ಭರದಿಂದ ಸಾಗಿದೆ.
