ಮೈಸೂರು: ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಜಯಲಕ್ಷ್ಮಿ (45) ಹಾಗೂ ಮಗಳು ಪ್ರಿಯಾ (20) ಮೃತರು.

ಸಾವಿಗೆ ನ್ಯಾಯ ಕೇಳಲು ಹೋದ ನಮ್ಮ ಮೇಲೆ ಪೊಲೀಸರು ಸಂಯಮದಿಂದ ವರ್ತಿಸಿಲ್ಲ ಎಂದು ಆರೋಪಿಸಿರುವ ಕೆಲ ಗ್ರಾಮಸ್ಥರು, ಮೃತ ಜಯಲಕ್ಷ್ಮಿಯ ಪತಿ ಹಾಗೂ ಈತನ ಕುಟುಂಬಸ್ಥರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
22 ವರ್ಷಗಳ ಹಿಂದೆ ಜಯಲಕ್ಷ್ಮಿಯನ್ನು ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿ ಮತ್ತು ಮಗಳು ಮನೆಯ ತಂಬಾಕು ಬೇಯಿಸುವ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
”ತಾಯಿ ಮತ್ತು ಪುತ್ರಿಯ ಸಾವಿನಲ್ಲಿ ಗ್ರಾಮದ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಾದ ಅಲ್ಲಿ ಯಾವುದೇ ಟೇಬಲ್ ಆಗಲಿ, ಸ್ಟೂಲ್ ಆಗಲಿ, ಚೇರ್ ಆಗಲಿ ಯಾವೂದು ಇಲ್ಲ. ಹಾಗಾಗಿ ನೇಣು ಹಾಕಿಕೊಳ್ಳಲು ಸಾಧ್ಯವಿಲ್ಲ. ತಡರಾತ್ರಿ ಯಾರೋ ನೇಣು ಬಿಗಿದು ಕೊಲೆ ಮಾಡಿರಬಹುದು. ಯಾವುದೋ ಕಾರಣದಿಂದ ಇದನ್ನು ಮುಚ್ಚಿಡಲಾಗುತ್ತಿದೆ. ಪೊಲೀಸರು ಸಹ ದೂರು ನೀಡಲು ಹೋದರೆ ತೆಗೆದುಕೊಂಡಿಲ್ಲ. ಜಯರಾಮ ಮತ್ತು ಆತನ ಕಡೆಯವರು ನೀಡಿದ ದೂರನ್ನು ತೆಗೆದುಕೊಳ್ಳಲಾಗಿದೆ ಎಂದು ನಮ್ಮೊಂದಿಗೆ ಸಂಯಮದಿಂದ ವರ್ತಿಸಿಲ್ಲ. ಅಲ್ಲದೇ ಜಯರಾಮ ಮತ್ತು ಆತನ ಕಡೆಯವರನ್ನು ವಿಚಾರಣೆ ಮಾಡದೇ ನ್ಯಾಯ ಕೇಳಲುಹೋದ ನಮ್ಮ ಮೇಲೆಯೇ ದರ್ಪ ತೋರಿದ್ದಾರೆ. ಇದೊಂದು ಕೊಲೆ ಪ್ರಕರಣವಾಗಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ” ಎಂದು ಮೃತ ಜಯಲಕ್ಷ್ಮಿ ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
”25 ವರ್ಷಗಳ ಹಿಂದೆ ಜಯಲಕ್ಷ್ಮಿ ಅವರನ್ನು ವಿವಾಹವಾಗಿದ್ದ ಜಯರಾಮ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೇ ಮಗಳು ಮಮತಾ, ಎರಡನೇ ಪ್ರಿಯಾ ಆಗಿದ್ದು, ಇಬ್ಬರು ವ್ಯಾಸಂಗ ಮಾಡುತ್ತಿದ್ದರು. ಪ್ರಿಯಾ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಉತ್ತೀರ್ಣಳಾಗಿ ಸಿಇಟಿ/ನೀಟ್ ಪರೀಕ್ಷೆಯನ್ನು ಸಹ ಬರೆದಿದ್ದಳು. ಇದರ ಫಲಿತಾಂಶ ಬಂದಿದ್ದು, ಅದರಲ್ಲಿ ಸರಿಯಾದ ಅಂಕ ಬರದ ಕಾರಣ ಪ್ರಿಯಾ ಮತ್ತು ನನ್ನ ತಮ್ಮನ ಹೆಂಡತಿ ಜಯಲಕ್ಷ್ಮಿ ಇಬ್ಬರೂ ಚಿಂತೆಗೀಡಾಗಿದ್ದರು. ಯಾವುದೇ ಕೆಲಸ ಕಾರ್ಯದಲ್ಲಿ ಗಮನ ಹರಿಸುತ್ತಿರಲಿಲ್ಲ. ಈ ಬಗ್ಗೆ ಜಯರಾಮು ಮತ್ತು ನಾವು ಬುದ್ಧಿವಾದ ಹೇಳಿ ಸಮಾಧಾನ ಮಾಡಿದ್ದೆವು. ಇದೇ 9ರಂದು ಮಧ್ಯಾಹ್ನ ಜಯರಾಮನ ಮೊದಲನೇ ಮಗಳು ತನ್ನ ತಾಯಿ ಮತ್ತು ಸಹೋದರಿಯನ್ನು ಹುಡುಕುತ್ತಿದ್ದಳು. ಈ ವಿಚಾರ ಕೇಳಿ ನಾನೂ ಹುಡುಕಿಕೊಂಡು ಕೊಟ್ಟಿಗೆ ಹತ್ತಿರ ಹೋದಾಗ ಅಲ್ಲಿ ತಾಯಿ ಜಯಲಕ್ಷ್ಮಿ ಮತ್ತು ಪುತ್ರಿ ಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ತಕ್ಷಣ ಜಯರಾಮುಗೆ ಈ ವಿಷಯ ತಿಳಿಸಿದೆವು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪುತ್ರಿ ಪ್ರಿಯಾಳನ್ನು ಜಯಲಕ್ಷ್ಮಿ ತುಂಬಾ ಪ್ರೀತಿಸುತ್ತಿದ್ದಳು. ಆದರೆ, ಸಿಇಟಿ/ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರಿಂದ ಇಬ್ಬರೂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹೊರತು ಬೇರೆ ಕಾರಣ ಇಲ್ಲ. ನನ್ನ ತಮ್ಮ ಜಯರಾಮು ಈ ಸಾವಿನ ಸುದ್ದಿಯಿಂದ ದುಃಖಿತನಾಗಿದ್ದರಿಂದ ನಾನು ಈ ದೂರು ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಜಯರಾಮು ಅವರ ಸಹೋದರ ನಾಗೇಶ್ ಅವರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
