ʼಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಭಾರತ ಭಿಕ್ಷುಕರ ದೇಶ ಆಗಿತ್ತುʼ – ಶ್ರೀರಾಮುಲು ವಿವಾದಾತ್ಮಕ ಹೇಳಿಕೆ

ಬಳ್ಳಾರಿ: ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮೊದಲು ಭಾರತ (India) ಭಿಕ್ಷುಕರ ದೇಶ ಆಗಿತ್ತು ಎಂದು ಮಾಜಿ ಸಚಿವ ಶ್ರೀರಾಮುಲು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಸರ್ಕಾರ 11 ವರ್ಷ ಪೂರೈಸಿದ ಹಿನ್ನೆಲೆ ಹನ್ನೊಂದು ವರ್ಷದ ಸಾಧನೆ ಕುರಿತು ಮಾತನಾಡಿದ ಅವರು, ನರೇಂದ್ರ ಮೋದಿ ಬರೋದಕ್ಕೂ ಮೊದಲು ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಈಗ ಕಾಲ ಬದಲಾಗಿದೆ, ಇದೀಗ ಭಾರತವನ್ನು ವಿಶ್ವವೇ ನೋಡುವಂತೆ ಮಾಡಿದ್ದಾರೆ. ನೆಹರು ಅವರ ಕಾಲದಲ್ಲಿ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡಿದ್ದರು. ದೇಶದ ಅಭಿವೃದ್ಧಿ ಬಗ್ಗೆ ನೆಹರು ಕುಟುಂಬ ಚಿಂತನೆ ಮಾಡಿಲ್ಲ. ವೈಯಕ್ತಿಕ ಅಭಿವೃದ್ಧಿ ಹೊಂದಿದ್ದ ಹೊರತು ದೇಶ ಅಭಿವೃದ್ಧಿ ಮಾಡಲಿಲ್ಲ. ಚೀನಾ-ಭಾರತದ ಯುದ್ಧದಲ್ಲಿ ಭಾರತ ಮಂಡಿಯೂರಿತು. ಇದಕ್ಕೆ ನೆಹರು ನಿಲುವು ಕಾರಣವಾಯಿತು. ನೆಹರು ಅವರ ಕಾಲಘಟ್ಟ ಕೆಟ್ಟದಾಗಿತ್ತು, ಸಾವಿರಾರು ಸೈನಿಕರು ಹುತಾತ್ಮರಾದರು ಎಂದು ನೆಹರು ಮತ್ತು ಇಂದಿರಾ ಗಾಂಧಿ ಕಾಲಘಟ್ಟದ ಭ್ರಷ್ಟಾಚಾರದ ವಿವರಣೆ ನೀಡಿದರು

ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ಕಮಿಷನ್ ಮಧ್ಯವರ್ತಿಗಳನ್ನು ಬೆಳೆಸೋದೇ ಗಾಂಧಿ ಕುಟುಂಬದ ಕೆಲಸ. ಭೋಫರ್ಸ್ ಹಗರಣದಲ್ಲಿ ಇನ್ನೂ ಮುಕ್ತರಾಗಿಲ್ಲ. ರಾಹುಲ್ ಸೋನಿಯಾ ಕೂಡ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಜೈಲಿಗೆ ಹೋಗುತ್ತಾರೆ. ನ್ಯಾಷನಲ್ ಹೆರಾಲ್ಡ್ ದೊಡ್ಡ ಗೋಲ್‌ಮಾಲ್, ಪ್ರಕರಣದಲ್ಲಿ ಕರ್ನಾಟಕದ ನಾಯಕರು ಇದ್ದಾರೆ. ವಿಶ್ವದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡಿದ್ದು ಮೋದಿ. 60 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ದುರ್ಬಲ ದೇಶವಾಗಿತ್ತು. ಯುಪಿಎ ಆಳ್ವಿಕೆಯಲ್ಲಿ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು ಎಂದು ಹರಿಹಾಯ್ದರು.

ಕಳೆದ ಹತ್ತು ವರ್ಷದಲ್ಲಿ ಭಾರತ ಆರ್ಥಿಕವಾಗಿ ಪ್ರಬಲ ದೇಶವಾಗಿ ಬದಲಾಗಿದೆ. ವಿರೋಧ ಪಕ್ಷದಲ್ಲಿ ಕೂಡುವಷ್ಟು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಲೋಕಸಭೆಯಲ್ಲಿ ಗಳಿಸಿದೆ. ಕಾಂಗ್ರೆಸ್ ಆಳ್ವಿಕೆಯ ರಾಜ್ಯದಲ್ಲಿ ಕ್ರೈಂ ಪ್ರಕರಣ ಹೆಚ್ಚಾಗಿವೆ. ದೇಶದಲ್ಲಿ ಹೆಚ್ಚು ವಿಮಾನ ನಿಲ್ದಾಣ ಸ್ಥಾಪನೆ, ರೈಲ್ವೆ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹೆಚ್ಚಾಗಿ ನಿರ್ಮಾಣವಾಗಿವೆ. 370 ರದ್ದಾದ ಬಳಿಕ ದೇಶಕ್ಕೆ ಬೆಂಕಿ ಹತ್ತುತ್ತದೆ ಎಂದ್ದಿದ್ದರು, ಆದರೆ ಮೋದಿ ಅದ್ಯಾವುದಕ್ಕೂ ಅವಕಾಶ ಕೊಡಲಿಲ್ಲ. ತ್ರಿವಳಿ ತಲಾಕ್ ರದ್ದು, ವಕ್ಫ್ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಜನಪರ ಕೆಲಸ ಮಾಡಿದ್ದಾರೆ. ಉಗ್ರರನ್ನು ಮಟ್ಟ ಹಾಕುವ ಕೆಲಸ ಮಾಡಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ ಎಂದು ಮೋದಿ ಸರ್ಕಾರದ ಯೋಜನೆ ಮತ್ತು ಅಭಿವೃದ್ಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ 70 ವರ್ಷದಲ್ಲಿ ಮಾಡದೇ ಇರೋ ಸಾಧನೆ ಕಳೆದ ಹತ್ತು ವರ್ಷದಲ್ಲಿ ಮೋದಿ ಮಾಡಿದ್ದಾರೆ. ಕಿಸಾನ್ ಸನ್ಮಾನ್ ಯೋಜನೆಯಡಿ ರೈತರಿಗೆ ಆರು ಸಾವಿರ ಹಣ ನೀಡಲಾಗುತ್ತಿದೆ, ಆದರೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಹಣ ನೀಡುತ್ತಿಲ್ಲ. ಪಹಲ್ಗಾಮ್ ದಾಳಿ ಬಳಿಕ ಉಗ್ರರ ತಾಣ ನಾಶ ಮಾಡಲಾಗಿದೆ. ಮೋದಿ ನೇತೃತ್ವದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ನೆಹರು ಪ್ರಧಾನಿ ಇದ್ದಂತ ಸಮಯದಲ್ಲಿ ಭಾರತವನ್ನು ಭಿಕ್ಷುಕರ ದೇಶ ಎಂದು ಹೇಳುತ್ತಿದ್ದರು. ಆದರೆ ಈ ಮಾತು ಹೇಳಿದ್ದು ನಾನಲ್ಲ, ಹಳ್ಳಿಯಲ್ಲಿ ಜನ ಹೇಳುತ್ತಿದ್ದರು. ಇವತ್ತಿನ ಜಿಡಿಪಿಯಲ್ಲಿ (ಆರ್ಥಿಕ ವ್ಯವಸ್ಥೆ) ಭಾರತ ಮೂರನೇ ಸ್ಥಾನದಲ್ಲಿದೆ. ವಾಜಪೇಯಿ ಕಾಲದಲ್ಲಿಯೂ ಭಾರತ ಅಭಿವೃದ್ಧಿ ಹೊಂದಿತ್ತು. ಟ್ರಂಪ್ ಹೇಳಿಕೆಯಿಂದ ಯುದ್ಧ ನಿಲ್ಲಿಸಿಲ್ಲ, ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದರು.