ಸಿಗಂದೂರು ಸೇತುವೆ ಅಂತಿಮ ಹಂತದ ಕಾಮಗಾರಿ: ದೇಶದ 2ನೇ ಅತಿ ಉದ್ದದ ಕೇಬಲ್​ ಬ್ರಿಡ್ಜ್​ ಇದು!

ಶಿವಮೊಗ್ಗ: ಬಯಲು ಸೀಮೆ, ಮಲೆನಾಡು ಹಾಗೂ ಕರಾವಳಿಯನ್ನು ಬೇಸೆಯುವ ಭಾಗವಾಗಿ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಸೇತುವೆ ನಿರ್ಮಾಣದಿಂದ ದಶಕಗಳ‌ ಕನಸು ನನಸಾಗಿದೆ. ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಸಿಗಂದೂರು ಸೇತುವೆ ದೇಶದ ಕೇಬಲ್​ ಆಧಾರಿತ ಸೇತುವೆಗಳಲ್ಲಿ 2ನೇ ಅತಿ ಉದ್ದದ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಸೇತುವೆಯ ವಿಶೇಷತೆ ಹಾಗೂ ಕಾಮಗಾರಿ ಕುರಿತು ಮುಖ್ಯ ಇಂಜಿನಿಯರ್ ಪೀರ್​ಪಾಷಾ ಮಾತನಾಡಿ, “ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಲಾಂಗೆಸ್ಟ್​ ಸ್ಪ್ಯಾನ್​ ಬ್ರಿಡ್ಜ್​ ಇದು. ಸಾಮಾನ್ಯವಾಗಿ ಒಂದು ಸ್ಪ್ಯಾನ್​ 130 ರಿಂದ 140 ಮೀಟರ್​ ಇರುತ್ತದೆ. ಅಷ್ಟು ಮಾಡುವುದು ಸಾಧ್ಯವಿಲ್ಲ ಎಂದು, ಅದನ್ನು ಕೇಬಲ್​ ಆಧಾರಿತ ಸೇತುವೆ​ ಮಾಡುವ ಯೋಚನೆ ಮಾಡಿದೆವು. ಎಷ್ಷು ಉದ್ದ ಮಾಡಬಹುದು ಎಂದು ಅಂದಾಜಿಸಿದಾಗ 170 ರಿಂದ 180 ಮೀಟರ್​ ವರೆಗೆ ಮಾಡಬಹುದು ಎಂದು ವಿನ್ಯಾಸಗೊಳಿಸಿದೆವು. ಅದರಂತೆ 177 ಮೀಟರ್​ ಅಂತರದಂತೆ 4 ಸ್ಪ್ಯಾನ್​ಗಳನ್ನು ಹಾಕಿ 140 ಅಡಿ ಅಳದ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ” ಎಂದು ತಿಳಿಸಿದರು.

“ಆರೂ ವಿಧದ ಸೇತುವೆಗಳ ವಿನ್ಯಾಸಗಳನ್ನು ಎಸ್​ಎಫ್​ಸಿ ಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆದರೆ ಕೇಬಲ್​ ಆಧಾರಿತ ಸೇತುವೆಯನ್ನೇ ನಿರ್ಮಾಣ ಮಾಡಬೇಕು ಎನ್ನುವುದಕ್ಕೆ ಎಲ್ಲಾ ರೀತಿಯ ಕಾರಣಗಳನ್ನು ಒದಗಿಸಿ, 2019ರಲ್ಲಿ ಕೇಬಲ್​ ಆಧಾರಿತ ಸೇತುವೆಗೆ ಅನುಮೋದನೆ ಪಡೆದು, ನಿರ್ಮಾಣ ಕಾರ್ಯ ಪ್ರಾರಂಭಿಸಲಾಯಿತು. ಈ ಸೇತುವೆಗೆ ಅನುಮತಿ ಸಿಕ್ಕಾಗ ಇದು ದೇಶದ ಅತೀ ಉದ್ದದ ಎರಡನೇ ಕೇಬಲ್​ ಆಧಾರಿತ ಸೇತುವೆ ಆಗಿತ್ತು” ಎಂದು ಹೇಳಿದರು.

“ಕೇಂದ್ರದ ಭೂ ಸುಧಾರಣಾ ಇಲಾಖೆರವರು ಇಲ್ಲಿಯವರೆಗೂ ಈ ಕೇಬಲ್ ಸ್ಟೇಯ್ಡ್​ ಬ್ರಿಡ್ಜ್​ ತಂತ್ರಜ್ಞಾನದಲ್ಲಿ ಎಂಟು ಸೇತುವೆಗಳಿಗೆ ಅನುಮತಿ ನೀಡಿದ್ದಾರೆ. ಇದು ಎಂಟನೇಯದು. ಕೇಬಲ್ ಸ್ಟೇಯ್ಡ್​ ಟೆಕ್ನಾಲಜಿಯ ಸೇತುವೆಯಲ್ಲಿ ನಾಲ್ಕು ಪೈಲಾನ್​ಗಳಿರುತ್ತವೆ. ಅಂದ್ರೆ ನಾಲ್ಕು ಪೌಂಡೇಷನ್ ಮೇಲೆ ನಿರ್ಮಾಣ ಮಾಡುವುದು. ಪೌಂಡೇಷನ್ ಮೇಲೆ ಪೈಲಾನ್ ಹಾಕಿ ಅದಕ್ಕೆ ಕೇಬಲ್ ಅಳವಡಿಸಲಾಗುತ್ತದೆ. ಸೇತುವೆಯ ಶೇ 70ರಷ್ಟು ಭಾರವನ್ನು ಈ ಕೇಬಲ್​ಗಳು ಹಿಡಿದುಕೊಳ್ಳುವ ವಿನ್ಯಾಸ ಇದು” ಎಂದು ವಿವರಿಸಿದರು.

ಏನಿದು ಪಿಯರ್?​: “ಈ ಸೇತುವೆಯನ್ನು ಅಂದು 423.15 ಕೋಟಿ ರೂ.ಗೆ ಮಂಜೂರಾತಿ ನೀಡಿದ್ದರು. ಈ ಸೇತುವೆಯ ಒಟ್ಟು ಉದ್ದ 2.4 ಕಿ.ಮೀ. ಇದು 17 ಪಿಯರ್ ಹಾಗೂ ಎರಡು ಅಬಟ್​ಮೆಂಟ್ ಒಳಗೊಂಡಿದೆ. ಪ್ರಾರಂಭದಲ್ಲಿ ಇರುವ ಒಂದು ಗೋಡೆಗೆ ಏ-1 ಹಾಗೂ ಕೊನೆಯ ಗೋಡೆಗೆ ಎ-2 ಅಂತಾರೆ. ಇವುಗಳ‌ ಮಧ್ಯದಲ್ಲಿ ಬರುವ ಗೋಡೆಗಳಿಗೆ ಪಿಯರ್ ಎಂದು ಕರೆಯುತ್ತಾರೆ. ಸೇತುವೆಯ 17 ಪಿಯರ್​ಗಳಿಗೆ ಪೌಂಡೇಷನ್ ಮಾಡುವಾಗ ಒಟ್ಟು 165 ಪೈಲ್ಸ್ ಹಾಕಿ ನಿರ್ಮಾಣ ​ಮಾಡಲಾಗಿದೆ” ಎಂದು ಹೇಳಿದರು.

“ಪೈಲ್ಸ್​ಗೆ ಕ್ಯಾಪ್ ಅಳವಡಿಕೆ ಮಾಡುವಾಗ ನೀರಿನ ಮಟ್ಟ ಕಡಿಮೆ ಆಗಲೇಬೇಕಿತ್ತು. ಹೀಗೆ ನೀರಿನ ಮಟ್ಟ ಕಡಿಮೆ ಆಗಿ, ಪೈಲ್ಸ್​ ಕ್ಯಾಪ್​ ಅಳವಡಿಸಲು 2022ರಲ್ಲಿ ನಮಗೆ ಅವಕಾಶ ಸಿಕ್ಕಿತು. ಆಗ ಕೇವಲ 45 ದಿನಗಳ‌ ಅವಧಿಯಲ್ಲಿಯೇ ಎಲ್ಲಾ ಪೈಲ್ಸ್​ಗಳಿಗೆ ಕ್ಯಾಪ್​ಗಳನ್ನು ಅಳವಡಿಸಿ ಮುಗಿಸಿದ್ದೆವು” ಎಂದರು.

“ಸೆಗ್ಮೆಂಟಲ್ ಬಾಕ್ಸ್ ಕಾರಿಡಾರ್ ಕಂ ಬ್ಯಾಲೆನ್ಸ್ ಹ್ಯಾಟಿ ಲಿವರ್ ಎಕ್ಸ್ಟ್ರಾ ಡೋರ್ ಸ್ಟೇಬಲ್ ಬ್ರಿಡ್ಜ್ ಎಂದು ಇಂಗ್ಲಿಷ್​ನಲ್ಲಿ ಕರೆಯುತ್ತಾರೆ. ಸೆಗ್ಮೆಂಟಲ್ ಬಾಕ್ಸ್ ಕಾರಿಡಾರ್​ನಲ್ಲಿ‌ ಒಂದೊಂದು ಸೆಗ್ಮೆಂಟ್ ಮೂರೂವರೆ ಮೀಟರ್​ ಅಗಲ ಹಾಗೂ ಎತ್ತರ ಮೂರೂವರೆಯಿಂದ ಎಂಟೂವರೆ ಮೀಟರ್ ತನಕ ಇರುತ್ತದೆ. ಇವುಗಳನ್ನು ಮುಂಚೆಯೇ ತಯಾರು ಮಾಡಿಕೊಂಡು ಇಟ್ಟಿರುತ್ತಾರೆ. ಹೀಗೆ 604 ಸೆಗ್ಮೆಂಟ್ ತಯಾರು ಮಾಡಿಕೊಂಡು ಜೋಡಿಸಲಾಗಿದೆ. ಕೇಬಲ್ ಅಳವಡಿಸಲಾಗಿದೆ” ಎಂದು ತಿಳಿಸಿದರು.

“ಪೈನಾಲ್ ಹಾಕಿದ ಮೇಲೆ ಅವುಗಳ ಮೇಲೆ ಮೆಟಲ್ ಫ್ರೇಮ್ ಹಾಕಲಾಗುತ್ತದೆ. ಆ ಮೆಟಲ್​ ಫ್ರೇಮ್​ ಹಾಕುವ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಎರಡು ಕಡೆ ವನ್ಯಜೀವಿಗಳ ಚಿತ್ರ, ಡಾಂಬರೀಕರಣ ಬಾಕಿ ಇದೆ. ಈಗ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೇ ಕೊನೆಯಲ್ಲಿ ಮಳೆ ಬಂದ ಕಾರಣ ಕಾಮಗಾರಿ ತಡವಾಗಿದೆ. ಡಾಂಬರೀಕರಣಕ್ಕೆ ಬಿಸಿಲು ಬೇಕಾದ ಕಾರಣ ಅದಕ್ಕಾಗಿ ಕಾಯಲಾಗುತ್ತಿದೆ” ಎಂದರು.