
ನವದೆಹಲಿ: ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚಾಗುತ್ತಿದ್ದು, ಸಕ್ರಿಯ ಕೇಸ್‌ಗಳ ಸಂಖ್ಯೆ 4 ಸಾವಿರ ಗಡಿಯಲ್ಲಿದೆ. ಈ ಪೈಕಿ ಕೇರಳದಲ್ಲಿಯೇ 1,400 ಕೇಸ್‌ಗಳು ವರದಿಯಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಭಾರತದಲ್ಲಿ ಕೋವಿಡ್ ಕೇಸ್‌ಗಳ ಸಂಖ್ಯೆ 4 ಸಾವಿರದ ಗಡಿಯಲ್ಲಿದ್ದು, ಸೋಮವಾರ 3,961 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ತಲಾ ಒಬ್ಬೊಬ್ಬರಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ
ಕೇರಳದಲ್ಲಿ 1,400, ಮಹಾರಾಷ್ಟ್ರ 506, ದೆಹಲಿ 483, ಗುಜರಾತ್ 338, ಪಶ್ಚಿಮ ಬಂಗಾಳ 331, ಕರ್ನಾಟಕ 253, ತಮಿಳುನಾಡು 189, ಉತ್ತರ ಪ್ರದೇಶ 157 ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ರಾಜೀವ್ ಬೆಹ್ಲ್ ಅವರು ಮಾತನಾಡಿ, ಕೋವಿಡ್‌ನ ರೂಪಾಂತರಿಯಾದ ಓಮಿಕ್ರಾನ್‌ನ ನಾಲ್ಕು ಉಪರೂಪಾಂತರಗಳಾದ LF.7, XFG, JN.1 ಮತ್ತು NB.1.8.1 ಕಂಡುಬಂದಿವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯಕ್ಕೆ ಯಾವುದೇ ಗಂಭೀರ ಪರಿಣಾಮ ಬೀರಿಲ್ಲ. ನಾವೆಲ್ಲರೂ ಜಾಗರೂಕರಾಗಿರಬೇಕು. ಆದರೆ ಆತಂಕಪಡುವಂತದ್ದು ಏನಿಲ್ಲ ಎಂದು ತಿಳಿಸಿದರು.


