
ಮಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, “ಎಲ್ಲಾ ಆರೋಪಿಗಳಿಗೆ ಮತ್ತು ಆರೋಪಿಗಳಿಗೆ ಸಹಕಾರ ಮಾಡುವವರಿಗೆ ಇದು ಎಚ್ಚರಿಕೆ. ಎಲ್ಲಾ ದೊಡ್ಡವರಿಗೆ, ಆರೋಪಿಗಳ ಮನೆಯಲ್ಲಿರುವವರು, ಗೆಳೆಯರು, ಸಂಬಂಧಿಕರಿಗೆ, ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವ ದೊಡ್ಡವರು ಅನಿಸಿಕೊಂಡವರೆಲ್ಲ ಕೇಳಿಸಿಕೊಳ್ಳಿ. ಯಾವುದೇ ಅಪರಾಧ ಮಾಡಿದ ಆರೋಪಿ ನಿಮ್ಮ ಮನೆಯಲ್ಲಿದ್ದರೂ ಅವರಿಗೆ ಆಶ್ರಯ, ಕಾರು, ದುಡ್ಡು, ಫೋನ್ ಕೊಡೋದು ಅಪರಾಧ. ಯಾವ ಊರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ, ಆದರೆ ನಾವು ಮಾತ್ರ ಅವನನ್ನು ಆರೋಪಿ ಅಂತಾನೇ ಹೇಳುತ್ತೇವೆ. ನಮ್ಮ ಬಿಎನ್ಎಸ್ ಅಡಿಯಲ್ಲಿ ಅದು ಕೂಡ ಒಂದು ಅಪರಾಧ” ಎಂದು ವಾರ್ನಿಂಗ್ ನೀಡಿದ್ದಾರೆ.
ದ್ವೇಷ ಭಾಷಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ -ಸಿಎಂ: ಮತ್ತೊಂದೆಡೆ, ಶನಿವಾರ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜೊತೆಗಿನ ಎರಡು ದಿನಗಳ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದ್ವೇಷ ಭಾಷಣ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ದೇಶನ ನೀಡಲಾಗಿದೆ. ದ್ವೇಷ ಭಾಷಣ ಸಂಬಂಧ ಕಾನೂನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಸುಹಾಸ್ ಶೆಟ್ಟಿ ಕೊಲೆ: ಫಾಝಿಲ್ ಕೊಲೆ ಆರೋಪಿ ರೌಡಿ ಶೀಟರ್ ಸುಹಾಸ್ ಶೆಟ್ಟಿ(32) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ತಲವಾರಿನಲ್ಲಿ ಕೊಚ್ಚಿ ಕೊಲೆಗೈದ ಘಟನೆ ಮಂಗಳೂರು ನಗರದ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ಮೇ 1ರಂದು ನಡೆದಿತ್ತು.
ಸುಹಾಸ್ ಶೆಟ್ಟಿ ಎರಡು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ನಡೆದಿದ್ದ ಫಾಜಿಲ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮತ್ತು ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಪ್ರಕರಣ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಸಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್, ರಂಜಿತ್, ಅಜರುದ್ದೀನ್ , ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಹಾಗೂ ನೌಷಾದ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆ: ಬಂಟ್ವಾಳದ ಕುರಿಯಾಳದ ಕಾಂಬೋಡಿಯ ಇರಾಕೋಡಿಯಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಪಿಕ್‌ಅಪ್ ವಾಹನ ಚಾಲಕ ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದ ಘಟನೆ ಮೆ.27 ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಪ್ರಥ್ವಿರಾಜ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಚಿಂತನ್ (19) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ, ಕಮಿಷನರ್ ವರ್ಗಾವಣೆ: ಜಿಲ್ಲೆಯಲ್ಲಿ ಸರಣಿ ಕೊಲೆ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿಯಾಗಿ ಡಾ.ಅರುಣ್ ಕೆ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕ ಮಾಡಿದೆ.
