ಕನ್ನಡಿಗನ ಹೋರಾಟ ವ್ಯರ್ಥ; ಐಪಿಎಲ್​ನಿಂದ ಹೊರಬಿದ್ದ 7ನೇ ತಂಡ​!

IPL 2025 GT vs MI Match Highlight: ಐಪಿಎಲ್ 2025ರ ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಗೆಲುವು ಸಾಧಿಸಿದೆ. ಗುಜರಾತ್​ ಟೈಟಾನ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ 20 ರನ್‌ಗಳಿಂದ ಜಯಗಳಿಸಿದೆ. ಭಾನುವಾರ ನಡೆಯಲಿರುವ ಕ್ವಾಲಿಫೈರ್ – 2 ​ಪಂದ್ಯದಲ್ಲಿ ಪಂಜಾಬ್ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿವೆ.

ಶುಕ್ರವಾರ ಮುಲ್ಲನ್ಪುರ್​ ಮೈದಾನದಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 228ರನ್​ಗಳನ್ನು ಕಲೆ ಹಾಕಿತು. ಈ ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ಗುಜರಾತ್ ತಂಡ ಅಂತಿಮ ಎಸೆತದವರೆಗ ಹೋರಾಡಿ ಸೋಲು ಕಂಡಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು. ಸಾಯಿ ಸುದರ್ಶನ್ (80) ಮತ್ತು ವಾಷಿಂಗ್ಟನ್ ಸುಂದರ್ (48) ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಗುಜರಾತ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಕಮಿಂದು ಮೆಂಡಿಸ್ (20), ರುದರ್ಫೋರ್ಡ್ (24), ರಾಹುಲ್ ತೆವಾಟಿಯಾ (16*) ಮತ್ತು ಶಾರುಖ್ ಖಾನ್ (13) ಸಾಮಾನ್ಯ ಸ್ಕೋರ್​ ಕಲೆಹಾಕಿದರು. ಡೆತ್​ ಓವರ್​ನಲ್ಲಿ ಮುಂಬೈ ಬೌಲರ್‌ಗಳು ರನ್‌ಗಳನ್ನು ನಿಯಂತ್ರಿಸುತ್ತಿದ್ದಂತೆ, ಗುಜರಾತ್​ ರನ್​ ವೇಗಕ್ಕೆ ಬ್ರೇಕ್​ ಬಿತ್ತು. ಮುಂಬೈ ಬೌಲರ್‌ಗಳಲ್ಲಿ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ, ಬುಮ್ರಾ, ರಿಚರ್ಡ್ ಗ್ಲೀಸನ್, ಸ್ಯಾಂಟ್ನರ್ ಮತ್ತು ಅಶ್ವನಿ ಕುಮಾರ್ ತಲಾ ಒಂದು ವಿಕೆಟ್ ಉರುಳಿಸಿದರು.

ರೋಹಿತ್ ಮಿಂಚಿನ ಬ್ಯಾಟಿಂಗ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ರೋಹಿತ್ ಶರ್ಮಾ 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂ 81ರನ್​ ಚಚ್ಚಿದರು. ಆರಂಭದಲ್ಲಿ ಎರಡು ವರದಾನ ಪಡೆದ ರೋಹಿತ್ ನಂತರ ಬೌಂಡರಿಗಳೊಂದಿಗೆ ಸಿಡಿದೆದ್ದರು.ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಮತ್ತೊಂದಡೆ ಜಾನಿ ಬೈರ್‌ಸ್ಟೋವ್ (47), ಸೂರ್ಯಕುಮಾರ್ ಯಾದವ್ (33), ತಿಲಕ್ ವರ್ಮಾ (25) ಮತ್ತು ಹಾರ್ದಿಕ್ ಪಾಂಡ್ಯ (22*) ಮಿಂಚಿನ ಬ್ಯಾಟಿಂಗ್​ ಮಾಡಿದರು. ಗುಜರಾತ್ ಬೌಲರ್‌ಗಳಲ್ಲಿ, ಸಾಯಿ ಕಿಶೋರ್ 2 ವಿಕೆಟ್, ಪ್ರಸಿದ್ಧ್ ಕೃಷ್ಣ 2 ಮತ್ತು ಸಿರಾಜ್ ಒಂದು ವಿಕೆಟ್ ಪಡೆದರು.

ಕನ್ನಡಿಗನ ಹೋರಾಟ ವ್ಯರ್ಥ: ಈ ಸೀಸನ್​ನಲ್ಲಿ ಗುಜರಾತ​ ಟೈಟಾನ್ಸ್​ ತಂಡದ ಪರ ಅದ್ಭತ ಪ್ರದರ್ಶನ ನೀಡಿದ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಟೂರ್ನಿ ಉದ್ಧಕ್ಕೂ ಉತ್ತಮ ಬೌಲಿಂಗ್​ ಮಾಡಿ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದಾರೆ. ಅವರು 15 ಪಂದ್ಯಗಳಲ್ಲಿ 25 ವಿಕೆಟ್​ ಉರುಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ ಪರ್ಪಲ್ ಕ್ಯಾಪ್​ ಸಹ ಹೊಂದಿದ್ದಾರೆ. ಆದರೆ ಇವರ ಹೋರಾಟ ನಿನ್ನೆ ಕೊನೆಗೊಂಡಿದೆ.