
ನವದೆಹಲಿ, ಮೇ 27: ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಕನ್ನಡಿಗರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದರು. ಆ ಬೇಡಿಕೆಗೆ ಕೇಂದ್ರ ಸರ್ಕಾರ ಈ ವರ್ಷ ಸ್ಪಂದಿಸಿದೆ. 2024-25ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿಗೆ ಅನಂತ್ ನಾಗ್ ಅವರ ಹೆಸರನ್ನು ಘೋಷಿಸಲಾಗಿತ್ತು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಖ್ಯಾತ ನಟ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸರಳವಾದ ಕುರ್ತಾ ಧರಿಸಿ ಬಂದಿದ್ದ ಅನಂತ್ ನಾಗ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಅವರ ಪತ್ನಿ ಗಾಯತ್ರಿ, ಮಗಳು ಹಾಗೂ ಅಳಿಯ ಸಂತೋಷದಿಂದ ಚಪ್ಪಾಳೆ ತಟ್ಟುತ್ತಾ ಅಭಿನಂದಿಸಿದರು. ಅನಂತ್ ನಾಗ್ 5 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಅಭಿನಯಿಸುತ್ತಿದ್ದಾರೆ. ಚಿತ್ರರಂಗ ಮಾತ್ರವಲ್ಲದೆ ರಾಜಕೀಯಕ್ಕೂ ಪದಾರ್ಪಣೆ ಮಾಡಿದ್ದ ಅನಂತ್ ನಾಗ್ ಕರ್ನಾಟಕದಿಂದ ಎಂಎಲ್ಎ ಹಾಗೂ ಎಂಎಲ್ಸಿಯಾಗಿಯೂ ಆಯ್ಕೆಯಾಗಿದ್ದರು. ಕಲಾ ರಂಗದಲ್ಲಿ ಅನಂತ್ ನಾಗ್ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಗೌರವಗಳಾಗಿದ್ದು, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ, ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣವನ್ನು ನೀಡಲಾಗುತ್ತದೆ. ಪದ್ಮಭೂಷಣ ಪ್ರಶಸ್ತಿಯನ್ನು ಅತ್ಯುನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 71 ಸಾಧಕರಿಗೆ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು.
