ದರ್ಶನ್ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಕೆ, ಫೋಟೊದಿಂದ ಹೆಚ್ಚಾಯ್ತು ಕಂಟಕ

ರೇಣುಕಾ ಸ್ವಾಮಿ  ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ವಿಚಾರಣೆಗೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಪ್ರಕರಣದ ತನಿಖೆಯನ್ನು ಎಸಿಪಿ ಚಂದನ್ ಕುಮಾರ್ ನಡೆಸುತ್ತಿದ್ದು, ನಿನ್ನೆ (ಮೇ 20) ದರ್ಶನ್ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಹೆಚ್ಚುವರಿ ಚಾರ್ಜ್​ಶೀಟ್​ ಇಂದಾಗಿ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

132 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಚಾರ್ಜ್​ಶೀಟ್​ನಲ್ಲಿ ಕೆಲ ಮಹತ್ವದ ಸಾಕ್ಷ್ಯಗಳ ಉಲ್ಲೇಖ ಮಾಡಲಾಗಿದೆ. ಜೊತೆಗೆ ಕೆಲ ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಶೆಡ್​ನಲ್ಲಿ ರೇಣುಕಾ ಸ್ವಾಮಿಯ ಕೊಲೆ ಆದ ದಿನ ದರ್ಶನ್ ಅಲ್ಲಿದ್ದ ಕೆಲ ಆರೋಪಿಗಳ ಜೊತೆಗೆ ಫೋಟೊ ತೆಗೆಸಿಕೊಂಡಿದ್ದರು, ಇದೀಗ ಆ ಫೋಟೊವನ್ನು ರಿಟ್ರೀವ್ ಮಾಡಿರುವ ಪೊಲೀಸರು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ದರ್ಶನ್ ಜತೆ ಪುನೀತ್, ರವಿಶಂಕರ್, ಅನುಕುಮಾರ್, ಜಗದೀಶ್ ಫೋಟೋ ತೆಗೆಸಿಕೊಂಡಿದ್ದರು. ಆದರೆ ಆ ನಂತರ ಆ ಫೋಟೊ ಅನ್ನು ಡಿಲೀಟ್ ಮಾಡಲಾಗಿತ್ತು. ಪುನೀತ್ ಮೊಬೈಲ್​ನಲ್ಲಿ ಆ ಫೋಟೊ ಇತ್ತು. ಪುನೀತ್ ಮೊಬೈಲ್​ ಅನ್ನು ಎಫ್​ಎಸ್​ಎಲ್​ಗೆ ಕಳಿಸಿದ್ದ ಪೊಲೀಸರು ಬಳಿಕ ಫೋಟೊ ರಿಟ್ರೀವ್ ಮಾಡಿದ್ದಾರೆ.

ದರ್ಶನ್​ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು, ಘಟನೆ ನಡೆದಾಗ ದರ್ಶನ್ ಸ್ಥಳದಲ್ಲಿ ಇರಲೇ ಇಲ್ಲ ಎಂಬಂತೆ ವಾದ ಮಂಡಿಸಿದ್ದರು. ಆದರೆ ಈಗ ಈ ಫೋಟೊ ಬಹಿರಂಗವಾದ ಬಳಿಕ ದರ್ಶನ್ ಸ್ಥಳದಲ್ಲಿ ಇದ್ದರು ಎಂಬುದಕ್ಕೆ ಇನ್ನಷ್ಟು ಪುಷ್ಠಿ ದೊರೆತಿದೆ. ಇದು ಮುಂದಿನ ದಿನಗಳಲ್ಲಿ ದರ್ಶನ್​ಗೆ ಕಂಟಕವಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ.

ಇದರ ನಡುವೆ ಕೃತ್ಯ ನಡೆದ ಬಳಿಕ ಪೊಲೀಸರು ಕೆಲ ಮೊಬೈಲ್, ವಾಹನಗಳು ಇನ್ನಿತರೆ ಕೆಲ ವಸ್ತುಗಳನ್ನು ಸೀಜ್ ಮಾಡಿದ್ದರು. ಅವುಗಳಲ್ಲಿ ಕೆಲವನ್ನು ಇದೀಗ ಮರಳಿಸಿದ್ದಾರೆ. ಕೆಲ ಕಾರುಗಳು, ಮೊಬೈಲ್​ಗಳನ್ನು ಆರೋಪಿಗಳ ಮನವಿ ಮೇರೆಗೆ ಮರಳಲಿಸಲಾಗಿದೆ.