ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಸಂದರ್ಭದಲ್ಲಿ, ಪಾಕ್ ಕಡೆಯಿಂದ ಹರಡಲಾಗುತ್ತಿರುವ ಸುಳ್ಳು ಪ್ರಚಾರಗಳನ್ನು ಭಾರತೀಯ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳು ಖಂಡಿಸಿವೆ. ಭಾರತದ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಲಾಗಿದೆ. ಪಾಕಿಸ್ತಾನದ 5 ವಾಯುನೆಲೆಗಳು ಮತ್ತು 2 ರಾಡಾರ್ ಬೇಸ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿರುವುದು ಇದೀಗ ಅಧಿಕೃತವಾಗಿ ದೃಢಪಟ್ಟಿದೆ.

ನವದೆಹಲಿ, ಮೇ 10: ಭಾರತ ಹಾಗೂ ಪಾಕಿಸ್ತಾನ ನಡುವಣ ದಾಳಿ, ಪ್ರತಿ ದಾಳಿ ತೀವ್ರಗೊಂಡಿರುವ ಸಂದರ್ಭದಲ್ಲೇ ಅನೇಕ ಸುಳ್ಳು ಸುದ್ದಿಗಳೂ ಹರಿದಾಡುತ್ತಿವೆ. ಅದರಲ್ಲಿಯೂ ಪಾಕಿಸ್ತಾನ ಕಡೆಯಿಂದ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ದುರುದ್ದೇಶದಿಂದ ಅನೇಕ ಸುಳ್ಳಿನ ಸರಮಾಲೆಯನ್ನೇ ಹರಿಯಬಿಡಲಾಗುತ್ತಿದೆ. ಅವುಗಳಿಗೆಲ್ಲ ಭಾರತ  ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆಗಳು ತೆರೆ ಎಳೆದಿವೆ. ಪಾಕ್ ವಿರುದ್ಧದ ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಈವರೆಗೆ ನಡೆದ ವಿದ್ಯಮಾನಗಳ ಬಗ್ಗೆ ಉಭಯ ಇಲಾಖೆಗಳು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದವು.

ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ದಾಳಿ ಸಂಬಂಧ ಮಾಹಿತಿ ನೀಡಿದ ನಂತರ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿವರವಾದ ಮಾಹಿತಿ ನೀಡಿದರು. ಪಾಕ್ ಸುಳ್ಳುಗಳನ್ನು ಬಯಲಿಗೆಳೆದರು.

ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತ

ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಪಾಕಿಸ್ತಾನದ ಸುದ್ದಿಗಳು ಸುಳ್ಳು ಎಂದ ಮಿಸ್ರಿ, ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಿದರು. ಆದರೆ, ಪಾಕಿಸ್ತಾನವು ನಾಗರಿಕರನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ ಎಂಬುದನ್ನು ಒಪ್ಪಿಕೊಂಡ ಅವರು, ಪಾಕಿಸ್ತಾನದ ಎಲ್ಲ ದಾಳಿಗಳನ್ನು ತಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪಾಕಿಸ್ತಾನದ 5 ವಾಯುನೆಲೆ, 2 ರಾಡಾರ್ ಬೇಸ್ ಧ್ವಂಸ

ಪಾಕಿಸ್ತಾನದ 5 ವಾಯುನೆಲೆಗಳನ್ನು ಹಾಗೂ 2 ರಾಡಾರ್ ಬೇಸ್​ಗಳನ್ನು ಭಾರತೀಯ ಸೇಣೆ ಧ್ವಂಸಗೊಳಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

ಸೇನಾ ಕಾರ್ಯಾಚರಣೆಗೆ ಭಾರತದಲ್ಲೇ ಆಕ್ಷೇಪ ವ್ಯಕ್ತವಾಗಿದೆಯೇ?

ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆಗೆ ಭಾರತ ಸರ್ಕಾರದ ವಿರುದ್ಧ ಸ್ವದೇಶದಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ ಎಂಬ ಶತ್ರು ರಾಷ್ಟ್ರದ ಆರೋಪಗಳಿಗೆ ಮಿಸ್ರಿ ತಿರುಗೇಟು ನೀಡಿದರು. ನಮ್ಮದು ಪಾಕಿಸ್ತಾನದ ರೀತಿಯ ದೇಶವಲ್ಲ. ಜಗತ್ತಿನಲ್ಲೇ ಬಲುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತೇವೆ. ಆದಾಗ್ಯೂ, ಭಯೋತ್ಪಾದಕರ ಪೋಷಕ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಗೆ ನಮ್ಮ ದೇಶದಲ್ಲಿ ವಿರೋಧ ವ್ಯಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡುತ್ತಿದೆ: ಮಿಸ್ರಿ

ಪಾಕಿಸ್ತಾನದ ದಾಳಿ ಯತ್ನಗಳಿಗೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡುತ್ತಿದೆ ಮತ್ತು ನೀಡಲಿದೆ. ಪಾಕಿಸ್ತಾನದ ಸೇನಾ ಸೆಂಟರ್​ ಮೇಲೆಯೂ ದಾಳಿ ಮಾಡಲಾಗಿದೆ ಎಂದು ಮಿಸ್ರಿ ತಿಳಿಸಿದರು.

ಭಾರತದ 26 ಸ್ಥಳಗಳ ಮೇಲೆ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಯತ್ನ

ಭಾರತದ 26 ಸ್ಥಳಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿಗೆ ಪ್ರಯತ್ನಿಸಿತ್ತು. ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಅದನ್ನು ತಡೆದು, ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಸೋಫಿಯಾ ಖುರೇಷಿ ತಿಳಿಸಿದರು. ಉದಮ್‌ಪುರ, ಭುಜ್, ಬಟಿಂಡಾ, ಪಠಾಣ್‌ಕೋಟ್ ಸೇರಿದಂತೆ 5 ಸ್ಥಳಗಳಲ್ಲಿ ಉಪಕರಣಗಳಿಗೆ ಸ್ವಲ್ಪ ಹಾನಿಯಾಗಿದೆ ಎಂದು ಅವರು ಹೇಳಿದರು.

ಶ್ರೀನಗರ, ಅವಂತಿಪುರದಲ್ಲಿ ಆಸ್ಪತ್ರೆ, ಶಾಲೆಯನ್ನು ಗುರಿಯಾಗಿಸಿ ದಾಳಿ ನಡೆದಿದ್ದು, ಅದನ್ನು ಹಿಮ್ಮೆಟ್ಟಿಸಿದ್ದೇವೆ. ಪಾಕಿಸ್ತಾನ ವಾಯು ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಹೇಳಿದರು. ಭಾರತ ಉದ್ವಿಗ್ನತೆಯನ್ನು ಬಯಸುವುದಿಲ್ಲ, ಹಾಗೆಂದು ದಾಳಿ ಮಾಡಿದಾಗ ಸುಮ್ಮನಿರುವುದೂ ಇಲ್ಲ ಎಂದು ಅವರು ಹೇಳಿದರು.