
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ಯಾರು ಟಾಪರ್, ಯಾವ ಜಿಲ್ಲೆ ಪ್ರಥಮ ಎಂಬ ಮಾಹಿತಿ ಇಲ್ಲಿದೆ.
kseab.karnataka.gov.in – Karnataka SSLC Class 10 Result 2025:
ಬೆಂಗಳೂರು, ಮೇ 02: 2024-2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ (SSLC Result) ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಈ ಬಾರಿ ಶೇ.66.1ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಯಾವ ಜಿಲ್ಲೆಗೆ ಯಾವ ಸ್ಥಾನ?
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ(ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ(ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ(ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ(ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ(ಶೇ.82.21), ಕಲಬುರಗಿ ಕೊನೆಯ ಸ್ಥಾನ(ಶೇ42.43).
2025 ಮಾರ್ಚ್ 21ರಿಂದ ಏಪ್ರಿಲ್ 4 ರವರೆಗೆ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿತ್ತು. 4,61563 ಹುಡುಗರು ಮತ್ತು 4,34,884 ಹುಡಗಿಯರು ಪರೀಕ್ಷೆ ಬರೆದಿದ್ದರು. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯವಿದ್ದು, https://karresults.nic.in ಜಾಲತಾಣದಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಸದ್ಯ ಪಾಸಾಗಿರುವ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಹೀಗೆ ನೋಡಿ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಹೇಗೆ ನೋಡಬಹುದು ಎಂದು ಹಂತ ಹಂತವಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.
- karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “SSLC ಫಲಿತಾಂಶ 2025” ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಬಳಿಕ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮೀಟ್ ಕೊಡಿ.
- ಪರದೆಯ ಮೇಲೆ ನಿಮ್ಮ ಫಲಿತಾಂಶವು ಕಾಣಿಸುತ್ತದೆ.
- ನಂತರ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.



