
ದೇವನಹಳ್ಳಿ, ಏಪ್ರಿಲ್ 09: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳ ದರ ಏರಿಕೆ ಮಾಡಲಾಗಿದೆ. ಈ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿರುವ ಪೋಷಕರಿಗೆ ಏಕಾಏಕಿ ಸಾವಿರಾರು ರೂ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಕೆಲ ಖಾಸಗಿ ಶಾಲೆಗಳ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಏಕಾಏಕಿ ಫೀಸ್ ಹೆಚ್ಚಳ: ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು
ಖಾಸಗಿ ಶಾಲೆಯಲ್ಲಿ ಏಕಾಏಕಿ ಶುಲ್ಕ ಹೆಚ್ಚಳದಿಂದ ಆಕ್ರೋಶಗೊಂಡ ಪೋಷಕರು ಬೆಂಗಳೂರು ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದ ಎಂವಿಎಂ ಶಾಲೆಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಅಂದಹಾಗೆ ಎಂವಿಎಂ ಶಾಲೆಯಲ್ಲಿ ಸುಮಾರು 850 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಭಾರಿಗಿಂತ ಈ ಭಾರಿ ಶಾಲೆಯ ಫೀಸ್ ಹೆಚ್ಚಳ ಮಾಡಿದ್ದಾರಂತೆ.
ಹಳೆಯ ಮಕ್ಕಳ ಶಾಲಾ ಶುಲ್ಕದ ಮೇಲೆ ಶೇ 50 ರಷ್ಟು ಶುಲ್ಕವನ್ನ ಹೆಚ್ಚಳ ಮಾಡಲಾಗಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ನಮಗೆ ಶಾಲಾ ಆಡಳಿತ ಮಂಡಳಿ ಫೀಸ್ ಹೆಚ್ಚಳ ಮಾಡಿದ್ದಾರೆ ಅಂತ ಶಾಲೆ ವಿರುದ್ದ ಕಿಡಿಕಾರಿದ್ದಾರೆ. ಅಲ್ಲದೆ ಶಾಲೆಯ ಬಳಿ ಜಮಾಯಿಸಿದ್ದ ಪೋಷಕರು ಏಕಾಏಕಿ ಫೀಸ್ 20 ರಿಂದ 25 ಸಾವಿರ ರೂ ಹೆಚ್ಚಳ ಮಾಡಿರುವುದನ್ನ ಖಂಡಿಸಿ ಆಡಳಿತ ಮಂಡಳಿ ವಿರುದ್ದ ಗರಂ ಆದರು. ಈ ವೇಳೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ: ಪೋಷಕರು ಆಕ್ರೋಶ
ಅಂದಹಾಗೆ ಎಲ್ಕೆಜಿಗೆ ಈ ಹಿಂದೆ 75 ಸಾವಿರ ರೂ ತೆಗೆದುಕೊಂಡಿದ್ದ ಶಾಲಾ ಆಡಳಿತ ಮಂಡಳಿ ಮುಂದಿನ ಭಾರಿ ಶುಲ್ಕ ಹೆಚ್ಚಳವಾಗಲ್ಲ ಅಂತ ಹೇಳಿದ್ರಂತೆ. ಆದರೆ ಈ ಭಾರಿ ಮಕ್ಕಳ ಶಾಲಾ ಶುಲ್ಕವನ್ನ 20 ಸಾವಿರ ರೂ. ಹೆಚ್ಚಳ ಮಾಡಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಮಕ್ಕಳ ವ್ಯಾನ್ ಶುಲ್ಕ ಕೂಡ ಹೆಚ್ಚಳ ಮಾಡಿರುವ ಎಂವಿಎಂ ಶಾಲೆ ಪೋಷಕರ ಜೇಬಿಗೆ ಕತ್ತರಿ ಹಾಕಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಅಂತ ಪೋಷಕರಾದ ಶಂಕರ್ ಎಂಬುವವರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಜಾಸ್ತಿ ಏನಾದರೂ ಪ್ರಶ್ನೆ ಮಾಡಿದರೆ ಶಾಲೆ ಆಡಳಿತ ಮಂಡಳಿ ಬೇಕಿದ್ದರೆ ಓದಿಸಿ ಇಲ್ಲಂದರೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅಂತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಜೊತೆಗೆ ಪೋಷಕರಿಗೆ ಶಾಲೆಯ ಶುಲ್ಕದ ಜೊತೆಗೆ ಬುಕ್ಸ್, ಬ್ಯಾಗ್ ಸೇರಿದಂತೆ ಎಲ್ಲದಕ್ಕೂ ಹೆಚ್ಚುವರಿಯಾಗಿ ಹಣ ತೆಗೆದುಕೊಳ್ತಿದ್ದು ಇದೀಗ ಈ ವರ್ಷ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗಿದ್ದು, ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಇಂತಿಷ್ಟು ಅಂತ ಫೀಸ್ ನಿಗದಿ ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ. ಇನ್ನೂ ಈ ಬಗ್ಗೆ ಶಾಲೆ ಆಡಳಿತ ಮಂಡಳೀಯವರನ್ನ ಕೇಳಲು ಮುಂದಾದರೆ ಅವರು ಪ್ರತಿಕ್ರಿಯೆ ನೀಡದೆ ಪೋಷಕರ ಬಳಿ ಮಾತನಾಡುತ್ತೇವೆ ಎಂದಿದ್ದಾರೆ.
ಜನರು ಒಂದ್ಕಡೆ ಬೆಲೆ ಏರಿಕೆ ಬಿಸಿಯಲ್ಲಿರುವಾಗಲೇ ಇದೀಗ ಕೆಲ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರುವುದು ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಚ್ಚೆತ್ತು ಪೋಷಕರ ಬಳಿ ಹಗಲು ದರೋಡೆ ಮಾಡಲು ಹೊರಟಿರುವ ಕೆಲ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.
