ಮುಡಾ ಹಗರಣ: ಇಡಿ ತನಿಖೆಗೆ ಹೈಕೋರ್ಟ್​ ಅನುಮತಿ, ಸಿಎಂ ಸೇರಿ ಹಲವರಿಗೆ ಎದುರಾಗುತ್ತಾ ಸಂಕಷ್ಟ?

ಬೆಂಗಳೂರು, (ಏಪ್ರಿಲ್ 02): ಮುಡಾ ಹಗರಣ ಪ್ರಕರಣದಲ್ಲಿ (Muda Scam Case) ಜಾರಿ ನಿರ್ದೇಶನಾಲಯ ಇಡಿ ತನಿಖೆಗೆ (Enforcement Directorate Probe) ಕರ್ನಾಟಕ ಹೈಕೋರ್ಟ್​ ವಿಭಾಗೀಯ ಪೀಠ (Karnataka High Court) ಅನುಮತಿ ನೀಡಿದೆ. ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್‌ ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಇಡಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಇಂದು (ಏಪ್ರಿಲ್ 02) ಆದೇಶ ಹೊರಡಿಸಿದೆ. ಕಳೆದ ತಿಂಗಳಷ್ಟೇ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ರೆ, ಇದೀಗ ಇಡಿ ತನಿಖೆಗೆ ಅನುಮತಿ ನೀಡಿದ್ದು ಪ್ರಕರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.  ಇದೀಗ ಮುಡಾ ಹಗರಣದಲ್ಲಿ ಇಡಿ ಪ್ರವೇಶ ಮಾಡುವುದರಿಂದ  ಪ್ರಕರಣದ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎ2 ಆಗಿರುವ ಪತ್ನಿ ಪಾರ್ವತಿ ಸೇರಿದಂತೆ ಇತರರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.

ಇಡಿ ಸಮನ್ಸ್ ರದ್ದು ಕೋರಿ ಡಾ.ಡಿ.ಬಿ.ನಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಟೇಶ್ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್​​ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೇ ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಇಡಿ ತನಿಖೆ ಮುಂದುವರಿಸಬಹುದು ತಿಳಿಸಿದೆ.