ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಕರ್ನಾಟಕ ಭವನ(ಕಾವೇರಿ)  ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಬುಧವಾರ ಸಂಜೆ 6:30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಭವ್ಯ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘನ ಉಪಸ್ಥಿತಿ ವಹಿಸಿದ್ದಲಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೌರವ ಆಹ್ವಾನಿತರಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರನ್ನ ಆಹ್ವಾನಿಸಲಾಗಿದೆ. 

ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಅವರಿನ್ನೂ ಆಹ್ವಾನಿಸಿದೆ. ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ ಕೂಡಾ ಭಾಗಿಯಾಗಲಿದ್ದಾರೆ. ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯಲ್ಲಿ (Chanakyapuri) ನಿರ್ಮಾಣವಾಗಿರುವ ಈ ಕಟ್ಟಡವು 3,532 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 12,212 ಚದರ ಮೀಟರ್ (1,31,450 ಚದರ ಅಡಿ) ನಿರ್ಮಾಣ ಪ್ರದೇಶವನ್ನು ಒಳಗೊಂಡಿರುವ ಈ ಭವನವು 2ಬಿ+ಜಿ+6ಯು ರಚನೆಯಲ್ಲಿ 9 ಅಂತಸ್ತುಗಳನ್ನು ಹೊಂದಿದೆ.

ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, ಅದರಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಂಗಳು ಮತ್ತು 18 ಸಿಂಗಲ್ ರೂಂಗಳು ಸೇರಿವೆ. ಇದರ ಜೊತೆಗೆ 86 ಶೌಚಾಲಯಗಳು ಮತ್ತು ಬೇಸ್‌ಮೆಂಟ್‌ನಲ್ಲಿ 10 ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಯೋಜನೆಯು 2018ರಲ್ಲಿ ಆರಂಭವಾಗಿದ್ದು, ಇದಕ್ಕಾಗಿ 81.00 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಕಾಮಗಾರಿ ಅಂತ್ಯದ ವೇಳೆಗೆ ಯೋಜನೆಯ ವೆಚ್ಚ 138 ಕೋಟಿ ರೂ. ತಲುಪಿದೆ.