ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು

ಹಾವೇರಿ, (ಮಾರ್ಚ್​ 14): ಹುಬ್ಬಳ್ಳಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ರೀತಿಯಲ್ಲೇ ಹಾವೇರಿ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಬರ್ಬರ ಹತ್ಯೆಯಾಗಿದೆ. ಕಳೆದ ಮಾರ್ಚ್ 6 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರುವುದು ಗೊತ್ತಾಗಿದೆ. ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದ್ದು, ತನಿಖೆ ತೀವ್ರಗೊಳಿಸಿದಾಗ ಸ್ವಾತಿ ಹಂತಕ ನಯಾಜ್ ಎನ್ನುವುದು ದೃಢಪಟ್ಟಿದ್ದು, ಇದೀಗ ನಯಾಜ್ ಸೇರಿದಂತೆ ಮೂವರು ಆರೋಪಗಳ ಹೆಡೆಮುರಿಕಟ್ಟಿದ್ದಾರೆ. ಆದ್ರೆ, ನಯಾಜ್​ನ ಕ್ರೌರ್ಯ ಬೆಚ್ಚಬೀಳಿಸಿದೆ.

ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಯಾಜ್ ಹಾಗೂ ವಿನಯ್ , ದುರ್ಗಾಚಾರಿ ಎಂಬ ಯುವಕರೇ ಸ್ವಾತಿ ಹತ್ಯೆ ಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸುವ ಸ್ಪರ್ಧೆ ಅಭಿಮಾನಿಗಳು. ಹೋರಿ ಬೆದರಿಸೋ ಸ್ಪರ್ಧೆ ಇದ್ದರೆ ಅಲ್ಲಿ ಹಾಜರಾಗ್ತಿದ್ದ ಸ್ವಾತಿಗೆ ಹೋರಿ ಬೆದರಿಸೋ ಸ್ಪರ್ಧೆ  ಕ್ರೇಜ್ ಇತ್ತು. ಈ ವೇಳೆ ನಯಾಜ್ , ವಿನಯ್ ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿದೆ. ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್ ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಎಂದು ಜಗಳ ಮಾಡಿದ್ದಾಳೆ.

ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಮನಸ್ತಾಪ ಉಂಟಾಗಿದ್ದು, ನಂತರ ನಯಾಜ್ , ವಿನಯ್ ಹಾಗೂ ದುರ್ಗಾಚಾರಿಗೂ ಈ ವಿಚಾರ ತಿಳಿಸಿದ್ದಾನೆ. ಸ್ವಾತಿ ಕಾಟ ಹೆಚ್ಚಾಗಿದೆ. ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡು ಆಕೆಯ ಕೊಲೆಗೆ ಸ್ಕೆಚ್​ ಹಾಕಿದ್ದಾರೆ. ಸ್ಕೆಚ್​ನಂತೆ ಆರೋಪಿಗಳು ಬಾಡಿಗೆ ಕಾರು ಮಾಡಿಕೊಂಡು ಬಂದು ಸ್ವಾತಿಯನ್ನು ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಾರಿನಲ್ಲೇ ಟವೆಲ್ ನಿಂದ ಕುತ್ತಿಗೆಗೆ ಉರುಲು ಬಿಗಿದು ಉಸಿರುಗಟ್ಟಿಸಿ ಸ್ವಾತಿಯನ್ನು ಕೊಂದಿದ್ದಾರೆ. ನಂತರ ಕಾರಿನ ಡಿಕ್ಕಿಯಲ್ಲಿ ಶವವನ್ನು ಸಾಗಿಸಿ ತುಂಗಭದ್ರಾ ನದಿಗೆ ಬಿಸಾಡಿ ಪರಾರಿಯಾಗಿದ್ದಾರೆ. ಬಳಿಕ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಸ್ವಾತಿ ಪತ್ತೆಯಾಗಿತ್ತು. ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಿಸಿದ್ದ ಹಲಗೇರಿ ಪೊಲೀಸರು, ವಾರಸುದಾರರರು ಯಾರೂ ಇಲ್ಲದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದ್ರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ. ಇದರ ಬೆನ್ನಲ್ಲಿಯೇ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಹಂತಕರ ಸುಳಿವು ಸಿಕ್ಕಿದೆ.

ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ಪೋಷಕರು

ಕಳೆದ ಮಾರ್ಚ್ 3 ರಂದು ಸ್ವಾತಿ ಕಾಣೆಯಾಗಿದ್ದಳು. ಈ‌ ಕುರಿತು ಸ್ವಾತಿ ಪೋಷಕರು ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಬಳಿಕ ಮಾರ್ಚ್ 6 ರಂದು ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಸ್ವಾತಿ ಶವ ಪತ್ತೆಯಾಗಿತ್ತು. ರಾಣೆಬೆನ್ನೂರೀನ ಆಸ್ಪತ್ರೆಯೊಂದರಲ್ಲಿ ಸ್ವಾತಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು. ಸ್ವಾತಿ ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಿದ್ದಳು ಎನ್ನಲಾಗಿದೆ. ಸ್ವಾತಿ ಕೊಲೆಯಾಗಿದ್ದಾಗಿ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ಶವದ ಚಿತ್ರವನ್ನು ಪೋಷಕರಿಗೆ ತೋರಿಸಿದ್ದಾರೆ. ಫೋಟೋದಲ್ಲಿಯೇ ಈಕೆ ತನ್ನ ಮಗಳು ಎಂದು ತಾಯಿ ತಿಳಿಸಿದ್ದಾರೆ.

ಸಿಡಿದೆದ್ದ ಹಿಂದೂಪರ ಸಂಘಟನೆಗಳು

ಈ ನಡುವೆ ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ. ಸ್ವಾತಿ ಕೊಲೆ ಆರೋಪಿಗಳಿಗೆ ಕಠೀಣ ಶಿಕ್ಷೆ ಆಗಬೇಕು. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ.