ಸಿದ್ದರಾಮಯ್ಯ ಬಜೆಟ್​ಗೆ ನೂರಕ್ಕೆ ನೂರು ಮಾರ್ಕ್ಸ್​​ ಕೊಟ್ಟ ಬಿಜೆಪಿ ಶಾಸಕರು

ಬೆಂಗಳೂರು, ಮಾರ್ಚ್​​ 07: ಸಿಎಂ ಸಿದ್ದರಾಮಯ್ಯ ಇಂದು ತಮ್ಮ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಹತ್ತು ಹಲವು ಹೊಸ ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ. ಇತ್ತ ವಿಪಕ್ಷ ಬಿಜೆಪಿ ನಾಯಕರು ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ. ಇದು ಹಲಾಲ್, ಸಾಬರ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಬಿಜೆಪಿಯ ರೆಬೆಲ್​ ಶಾಸಕರು ಮಾತ್ರ ಸಿದ್ದರಾಮಯ್ಯ ಬಜೆಟ್​ ಅನ್ನು ಹಾಡಿಹೊಗಳಿದ್ದು, ಬಜೆಟ್​​ಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್ ಹೇಳಿದ್ದಾರೆ.

ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ಸಂಬಂಧಪಟ್ಟಂತೆ ನಂಬರ್ ಒನ್ ಬಜೆಟ್ ಕೊಟ್ಟಿದ್ದಾರೆ. ಬಿಜೆಪಿ ಅವರಿಗೆ ಮುಸ್ಲಿಂ ಒಂದೇ, ಬೇರೆ ಏನೂ ಕಾಣಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಶಾಸಕನಾಗಿ ಹೇಳುತ್ತಿದ್ದೇನೆ ನೂರಕ್ಕೆ ನೂರು ಬೆಂಗಳೂರಿಗೆ ಒಳ್ಳೆಯ ಬಜೆಟ್ ಘೋಷಣೆ ಮಾಡಿದ್ದಾರೆ. ಯಾವ ಸರ್ಕಾರದಲ್ಲಿ ಸಾಲ ಮಾಡಿಲ್ಲ ಹೇಳಿ. ಸಾಲ ಮಾಡಲಿ ಏನೇ ಮಾಡಲಿ ಬೆಂಗಳೂರಿಗೆ ಒಳ್ಳೆಯ ಬಜೆಟ್ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.

ಇದೊಂದು ಒಳ್ಳೆಯ ಬಜೆಟ್ ಎಂದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್

ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸಮಾಜಮುಖಿ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ವರ್ಗದ ಸಮುದಾಯಕ್ಕೂ ಯೋಜನೆಗಳನ್ನು ನೀಡಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ತಿಳಿಸಿದರು.

ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಶಾಸಕನಾಗಿ ಹೇಳುತ್ತಿದ್ದೇನೆ, ಇದೊಂದು ಒಳ್ಳೆಯ ಬಜೆಟ್. ಬಜೆಟ್​ ಕುರಿತು ಬಿಜೆಪಿ ನಾಯಕರು ಆರೋಪ ಮಾಡಲಿ. ನಾನು ಶಾಸಕನಾಗಿ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ.

ಶಾಸಕ ಎಸ್​​ಟಿ ಸೋಮಶೇಖರ್, ಶಾಸಕ ಶಿವರಾಮ್ ಹೆಬ್ಬಾರ್​ ಇತ್ತೀಚೆಗೆ ಕಾಂಗ್ರೆಸ್​​ನಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕೆಲ ದಿನಗಳಿಂದ ರೆಬೆಲ್​ ನಾಯಕರ ಪೈಕಿ ಇವರು ಬಿಜೆಪಿ ಕಾರ್ಯಕ್ರಮಗಳಿಂದ ಸ್ವಲ್ಪ ಕಾಯ್ದುಕೊಂಡಿದ್ದರು. ಹಾಗಾಗಿ ವಾಪಸ್​​​ ಕಾಂಗ್ರೆಸ್​​ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಬಳಿಕ ಆ ವಿಚಾರ ತಣ್ಣಗಾಗಿತ್ತು. ಇದೀಗ ರಾಜ್ಯ ಸರ್ಕಾರದ ಬಜೆಟ್​ಗೆ ಇಬ್ಬರು ಶಾಸಕರು ಹಾಡಿಹೊಗಳಿದ್ದಾರೆ.