ಕಾರವಾರ, ಜನವರಿ 13: ನೌಕಾನೆಲೆ ಸಿಬ್ಬಂದಿಯಿಂದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ಮಾಡಲಾಗಿದ್ದು, ಇದೀಗ ಹಲ್ಲೆ ಮಾಡಿರುವ ನೌಕಾನೆಲೆ ಸಿಬ್ಬಂದಿ ಬಂಧಿಸುವಂತೆ ಒತ್ತಾಯಿಸಿ ಕಾರವಾರ ಬಳಿಯ ನೇವಲ್ ಹೌಸಿಂಗ್ ಕಾಲೋನಿ ಬಳಿ ಪ್ರತಿಭಟನೆ ಮಾಡಲಾಗಿದೆ. ನಿನ್ನೆ ರಾತ್ರಿ 25ಕ್ಕೂ ಹೆಚ್ಚು ನೌಕಾನೆಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.+
ನಿನ್ನೆ ರಾತ್ರಿ ವೇಳೆ ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ನೌಕಾನೆಲೆ ಸಿಬ್ಬಂದಿಗಳು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಈ ವೇಳೆ ನೌಕಾನೆಲೆ ಸಿಬ್ಬಂದಿಯಿಂದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸದ್ಯ ಈ ವಿಚಾರವಾಗಿ ನೌಕರರು ಕೆಲಸಕ್ಕೆ ತೆರಳದಂತೆ ಗೇಟ್ ಬಳಿ ತಡೆದು ಪ್ರತಿಭಟನೆ ಮಾಡಲಾಗಿದೆ. ಕಾಲೋನಿಯ ಗೇಟ್ ಮುಂದೆ ಸಾರ್ವಜನಿಕರು ಜಮಾಯಿಸಿದ್ದಾರೆ. ಹಲ್ಲೆಕೋರರನ್ನು ಬಂಧಿಸುವವರೆಗೂ ನಾವು ಪ್ರತಿಭಟನೆ ಹಿಂಪಡೆಯಲ್ಲ ಎನ್ನುತ್ತಿದ್ದಾರೆ.
ಪ್ರತಿಭಟನಾಕಾರರಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಬೆಂಬಲ ನೀಡಿದ್ದು, ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ, ಮುಖಂಡರು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಸದ್ಯ ಈ ಘಟನೆಯಿಂದ ಕಾರವಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 4 ಡಿಎಆರ್ ತುಕಡಿ ಸೇರಿದಂತೆ ನೂರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.